ಗಾಂಧಿಜೀಯವರ ಬದುಕು, ಹೋರಾಟ ಇಂದಿಗೂ ಮಾದರಿಯಾಗಿದೆ: ಸಿ.ಎಸ್. ನಿರಂಜನ್‍ಕುಮಾರ್
ಚಾಮರಾಜನಗರ, ಅ. 07 :- ಮಹಾತ್ಮ ಗಾಂಧಿಜೀಯವರ ಬದುಕು, ಹೋರಾಟ, ಸಾಧನೆಗಳು ಇಂದಿನ ಪೀಳಿಗೆಗೂ ಮಾದರಿಯಾಗಿವೆ ಎಂದು ಶಾಸಕರಾದ ಸಿ.ಎಸ್. ನಿರಂಜನ್‍ಕುಮಾರ್ ಅವರು ತಿಳಿಸಿದರು.ಗುಂಡ್ಲುಪೇಟೆ ಪಟ್ಟಣದಲ್ಲಿಂದು ಮಹಾತ್ಮ ಗಾಂಧಿಜೀಯವರ 150ನೇ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವತಿಯಿಂದ ವಿಶೇಷವಾಗಿ ವಿನ್ಯಾಸಗೊಳಿಸಿರುವ ಗಾಂಧಿಜೀಯವರ ವಿಚಾರಧಾರೆ, ಕುರಿತ “ಗಾಂಧಿ-150 ಅಭಿಯಾನ” ಸ್ವಾಗತಿಸಿ ಅವರು ಮಾತನಾಡಿದರು.
ಗಾಂಧಿಜೀಯವರು ಅಹಿಂಸಾ ಮಾರ್ಗದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಹೋರಾಟದ ಹಾದಿ, ಪ್ರತಿಪಾದಿಸಿದ ವಿಚಾರಗಳನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕಿದೆ ಎಂದು ನಿರಂಜನ್‍ಕುಮಾರ್ ಅವರು ತಿಳಿಸಿದರು.
ಮಹಾತ್ಮ ಗಾಂಧಿಜೀಯವರು ಪಾನ ನಿಷೇಧ, ಸ್ವಚ್ಚತೆ ಕಾರ್ಯಕ್ರಮಗಳ ಬಗ್ಗೆ ಅಂದೇ ವಿಶೇಷ ಕಾಳಜಿ ವಹಿಸಿದ್ದರು. ಅನೇಕ ಮೌಲ್ಯಯುತ ವಿಷಯಗಳ ಕುರಿತು ಗಾಂಧಿಜೀಯವರು ಜನತೆಗೆ ತಿಳಿಸಿಕೊಟ್ಟಿದ್ದರು ಎಂದರು.
ಗಾಂಧಿಜೀಯವರ ಆದರ್ಶ, ತತ್ವ, ಸಿದ್ದಾಂತಗಳು ಹಾಗೂ ಸಾಧನೆಗಳನ್ನು ತಿಳಿಸುವ ಪ್ರಯತ್ನವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾಡುತ್ತಿದೆ. ಇದು ಹರ್ಷದಾಯಕ ವಿಚಾರ ಎಂದರು.
ಗಾಂಧಿಜೀಯವರ ಜೀವನ, ಹೋರಾಟ ಕುರಿತು ಸಮಗ್ರವಾಗಿ ಪರಿಚಯಿಸುವ ಸಲುವಾಗಿ ರೂಪಿಸಿರುವ ಗಾಂಧಿ-150 ಅಭಿಯಾನ ಯಶಸ್ವಿಯಾಗಲೆಂದು ನಿರಂಜನ್ ಕುಮಾರ್ ಅವರು ಹಾರೈಸಿದರು.
ನಂತರ ಮಹಾತ್ಮ ಗಾಂಧಿ-150 ಅಭಿಯಾನ ಗುಂಡ್ಲುಪೇಟೆ ಪಟ್ಟಣದಲ್ಲಿ ಯಶಸ್ವಿಯಾಗಿ ಮುಂದುವರೆಯಿತು. ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿದ ಗಾಂಧಿ ಸ್ತಬ್ದಚಿತ್ರವನ್ನು ಜನತೆ ಕುತೂಹಲದಿಂದ ವೀಕ್ಷಿಸಿದರು. ಶಾಸಕರಾದ ಸಿ.ಎಸ್. ನಿರಂಜನ್ ಕುಮಾರ್ ಅವರು ಸ್ತಬ್ದಚಿತ್ರದೊಂದಿಗೆ ಕೆಲ ಸಮಯ ಕಾಲ್ನಡಿಗೆಯಲ್ಲಿ ಸಂಚರಿಸಿದರು.
ಮುಖಂಡರಾದ ಮಾಡ್ರಹಳ್ಳಿ ನಾಗೇಂದ್ರ, ಅಗತಗೌಡನಹಳ್ಳಿ ಬಸವರಾಜು, ವರದಹಳ್ಳಿ ಪ್ರಸಾದ್, ಎಸ್.ಸಿ. ಮಂಜುನಾಥ್, ಕೆ.ಎಸ್. ಮಹೇಶ್, ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಳಿಕ ಗುಂಡ್ಲುಪೇಟೆ ಪಟ್ಟಣದಿಂದ ತೆರಳಿದ ಗಾಂಧಿ-150 ಅಭಿಯಾನ ಹೆದ್ದಾರಿ ಮೂಲಕ ಸಾಗಿ ಬೇಗೂರು ಹೋಬಳಿ ಕೇಂದ್ರಕ್ಕೆ ತಲುಪಿತು. ಅಲ್ಲಿಯೂ ಸಹ ಸಾಕಷ್ಟು ಸಂಖ್ಯೆಯ ಜನರು ಸ್ತಬ್ದಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ತದನಂತರ ಅಭಿಯಾನವು ಮೈಸೂರು ಗಡಿಭಾಗಕ್ಕೆ ತೆರಳಿತು.
No comments:
Post a Comment