Sunday, 14 October 2018

(09-10-2018/10-102018) ಹಣದುರುಪಯೋಗ: ಪಿ.ಡಿ.ಒ ಅಮಾನತು.



ಹಣದುರುಪಯೋಗ: ಪಿ.ಡಿ.ಒ ಅಮಾನತು.

ಚಾಮರಾಜನಗರ, ಅ. 10  ಹಣದುರುಪಯೋಗ ಹಾಗೂ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಮೂಲ ಆಲತ್ತೂರು ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ ಹಾಗೂ ಹಿಂದಿನ ಪಡಗೂರು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿದ್ದ ಡಿ.ಶಿವಕುಮಾರ್ ಎಂಬುವವರನ್ನು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಶಿವಕುಮಾರ್ ಅವರು ಈ ಹಿಂದೆ ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ 14ನೇ ಹಣಕಾಸು ಯೋಜನೆಯಡಿ ವೆಚ್ಚ ಭರಿಸುವ ಸಂದರ್ಭದಲ್ಲಿ ಹಲವಾರು ಗುರುತರ ನ್ಯೂನ್ಯತೆಗಳಿರುವುದಾಗಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿವರ ನೀಡಿದ್ದರು ಅಲ್ಲದೆ, ಕಡತ ಪರಿಶೀಲನೆ ವೇಳೆ ಯೋಜನೆಗಳಿಗೆ ಸಂಬಂಧಿಸಿದ ಹಣದುರುಪಯೋಗ ಮತ್ತು ಕರ್ತವ್ಯಲೋಪ ಎಸಗಿರುವುದು ಕಂಡುಬಂದಿದ್ದು, ಸದರಿ ನೌಕರರ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವಂತೆ ಸಹ ಗುಂಡ್ಲುಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ವರದಿ ನೀಡಿದ್ದರು.

ಈ ಸಂಬಂಧ ಕಾರಣ ಕೇಳುವ ನೋಟೀಸ್ ಅನ್ನು ಶಿವಕುಮಾರ್ ಅವರಿಗೆ ಜಾರಿ ಮಾಡಲಾಗಿದ್ದು, ಅವರ ಸಮಜಾಯಿಷಿಯು ಸಮರ್ಪಕವಾಗಿಲ್ಲದ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ಹಣದುರುಪಯೋಗ ಎಸಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಿರುವುದಾಗಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಕೆ.ಹರೀಶ್ ಕುಮಾರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಅ. 11ರಂದು ಬಸವೇಶ್ವರ, ಭಗೀರಥ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಪೂರ್ವಭಾವಿ ಸಭೆ
ಚಾಮರಾಜನಗರ, ಅ. 10- ಚಾಮರಾಜನಗರ ಜಿಲ್ಲಾ ಕೇಂದ್ರದÀಲ್ಲಿ ಜಗಜ್ಯೋತಿ ಬಸವೇಶ್ವರ, ಭಗೀರಥ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸುವ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 11 ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ.

ಸಮುದಾಯದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆಗೆ ಆಗಮಿಸಿ ಸಲಹೆ, ಸಹಕಾರ ನೀಡುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ. 

ಚಾಮರಾಜನಗರ ದಸರಾ: ಅ.14ರಂದು ರಂಗೋಲಿ ಸ್ಪರ್ಧೆ
ಚಾಮರಾಜನಗರ, ಅ. 1- ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಮಕ್ಕಳು ಮತ್ತು ಮಹಿಳೆಯರಿಗಾಗಿ ನಗರದ ಚಾಮರಾಜೇಶ್ವರ ದೇವಸ್ಥಾನ ಆವರಣದಲ್ಲಿ ಅಕ್ಟೋಬರ್ 14 ರಂದು ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. 
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ.
ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು 9 ರಿಂದ 18 ವಯೋಮಿತಿಯಲ್ಲಿರಬೇಕು. 19 ವರ್ಷದ ಮೇಲ್ಪಟ್ಟ ಮಹಿಳೆಯರಿಗಾಗಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ. ರಂಗೋಲಿ, ಪುಷ್ಪ ರಂಗೋಲಿಗೆ ಬೇಕಾಗುವ ಸಾಮಾಗ್ರಿಗಳನ್ನು ತಾವೇ ತರುವುದು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಮಕ್ಕಳು ಹಾಗೂ ಮಹಿಳೆಯರು ಜಿಲ್ಲಾಡಳಿತ ಭವನದ ಮೊದಲನೇ ಮಹಡಿಯಲ್ಲಿರುವ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 129 ರಲ್ಲಿ ಹೆಸರನ್ನು ಅಕ್ಟೋಬರ್ 13 ರೊಳಗೆ ನೋಂದಾಯಿಸಿಕೊಳ್ಳಬೇಕು. 
ಹೆಚ್ಚಿನ ಮಾಹಿತಿಗಾಗಿ ಶಾರದಾದೇವಿ ಮೊ. 9741710061ನ್ನು ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ.11ರಂದು ರಕ್ತದಾನ ಶಿಬಿರ
ಚಾಮರಾಜನಗರ, ಅ. 10 - ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 11 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಎ.ಡಿ.ಆರ್. ಕಟ್ಟಡದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಬಸವರಾಜ ಅವರು ಶಿಬಿರ ಉದ್ಘಾಟಿಸಲಿದ್ದಾರೆ.  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ಘನ ಉಪಸ್ಥಿತಿ ವಹಿಸುವರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ, ಸಿವಿಲ್ ನ್ಯಾಯಾಧೀಶರಾದ ಎಂ.ಪಿ.ಉಮೇಶ್, ವಕೀಲರ ಸಂಘದ ಕಾರ್ಯದರ್ಶಿ ಅರುಣ್ ಕುಮಾರ್, ವೈದ್ಯಕೀಯ ರಕ್ತ ತಪಾಸಣಾ ಅಧಿಕಾರಿ ಡಾ.ಸುಜಾತ, ಹಿರಿಯ ತಜÐರಾದ ಡಾ.ಮಹೇಶ್ ಮತ್ತು ಬಾಲನ್ಯಾಯಮಂಡಳಿ ಸದಸ್ಯರಾದ ಟಿ.ಜೆ.ಸುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 



ವಿವಿಧ ವೃತ್ತಿ ಯೋಜನೆಯಡಿ ಸಹಾಯಧನಕ್ಕೆ ಅಲ್ಪಸಂಖ್ಯಾತರಿಂದ ಅರ್ಜಿ ಅಹ್ವಾನ
ಚಾಮರಾಜನಗರ, ಅ. 09 - ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2018-19ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವೃತ್ತಿ ಪ್ರೋತ್ಸಾಹ ಯೋಜನೆಯಡಿಯಲ್ಲಿ ಸಹಾಯಧನ ಸೌಲಭ್ಯ ಪಡೆಯಲು ಮತೀಯ ಅಲ್ಪಸಂಖ್ಯಾತರಿಂದ ಅಂದರೆ ಮುಸಲ್ಮಾನರು, ಕ್ರೈಸ್ತರು,  ಜೈನರು, ಭೌದ್ಧ ಧರ್ಮೀಯರು, ಸಿಖ್ಖರು ಮತ್ತು ಪಾರ್ಸಿ ಜನಾಂಗದವರಿಂದ  ಅರ್ಜಿಯನ್ನು ಆಹ್ವಾನಿಸಿದೆ.
ಯೋಜನೆಯಡಿ ಹಣ್ಣು ತರಕಾರಿ, ಮಾಂಸ, ಮೀನು, ಎಳನೀರು, ಕಬ್ಬಿನ ಹಾಲು, ತಂಪು ಪಾನೀಯ ಮಾರಾಟ ಅಂಗಡಿ, ಹೈನುಗಾರಿಕೆ, ಲಾಂಡ್ರಿ, ಡ್ರೈಕ್ಲೀನಿಂಗ್, ಎಸಿ ರಿಪೇರಿ, ರೆಫ್ರಿಜರೇಟರ್, ಮೋಟಾರ್ ರಿವೈಂಡಿಂಗ್ ವಕ್ರ್ಸ್, ವಾಟರ್ ವಾಷ್ ಸರ್ವೀಸ್, ಪಂಚರ್ ಶಾಪ್, ಗ್ಯಾಸ್ ವೆಲ್ಡಿಂಗ್, ಮೆಕ್ಯಾನಿಕ್, ಕಾರ್‍ಪೆಂಟ್ರಿ, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ವಸ್ತುಗಳ ರಿಪೇರಿ ಇತ್ಯಾದಿ ವೃತ್ತಿಗಳಿಗೆ ಅಗತ್ಯವಿರುವ ಬಂಡವಾಳಕ್ಕಾಗಿ ಅಲ್ಪಸಂಖ್ಯಾತರು ರಾಷ್ಟ್ರೀಕೃತ ಬ್ಯಾಂಕ್, ಷೆಡ್ಯೂಲ್ ಬ್ಯಾಂಕ್,  ಗ್ರಾಮೀಣ ಬ್ಯಾಂಕ್‍ನಿಂದ ಪಡೆಯುವ 2ಲಕ್ಷ ರೂ.ಗಳ ಸಾಲಕ್ಕೆ ನಿಗಮದಿಂದ 1 ಲಕ್ಷ ರೂ.ಗಳ ಸಹಾಯಧನ ಮಂಜೂರು ಮಾಡಲಾಗುತ್ತದೆ.
ಅರ್ಜಿದಾರರು 18 ರಿಂದ 45 ವರ್ಷಗಳ ವಯೋಮಿತಿಯೊಳಗಿರಬೇಕು. ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಮತೀಯ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಕುಟುಂಬದ ವಾರ್ಷಿಕ ಆದಾಯ ಮಿತಿಯು ಗ್ರಾಮಾಂತರ ಪ್ರದೇಶದವರಿಗೆ 81,000 ರೂ ಮತ್ತು ನಗರ ಪ್ರದೇಶದವರಿಗೆ 1,03,000 ರೂ ಮೀರಬಾರದು
ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯನ್ನು ಹೊಂದಿರಬೇಕು. ಐ.ಎಫ್.ಎಸ್.ಸಿ ಕೋಡ್ ಹೊಂದಿರುವ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿರಬೇಕು. ಕುಟುಂಬದ ಸದಸ್ಯರು ಕೇಂದ್ರ, ರಾಜ್ಯ ಸರ್ಕಾರದ ನೌಕರಿಯಲ್ಲಿರಬಾರದು,
ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸಾಲ ಸೌಲಭ್ಯ ಪಡೆದಿರಬಾರದು.
ಯೋಜನಾ ವರದಿ ಸಲ್ಲಿಸಬೇಕು. ಸಾಲ ಮಂಜೂರಾತಿ ಮಾಡಿ ಬ್ಯಾಂಕ್‍ನವರು ನೀಡಿದ ಒಪ್ಪಿಗೆ ಪತ್ರವನ್ನು ಸಲ್ಲಿಸಬೇಕು.
ನಿಗದಿತ ಅರ್ಜಿ ನಮೂನೆಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿ ಅಕ್ಟೋಬರ್ 31ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು (ದೂ.ಸಂ: 08226-222332) ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

 
ಕೊಳ್ಳೇಗಾಲ ನಗರಸಭೆ ವಾರ್ಡ್ ನಂ-9ರ ಚುನಾವಣೆ: ಜಿಲ್ಲಾಧಿಕಾರಿಯವರಿಂದ ಅಧಿಸೂಚನೆ ಪ್ರಕಟ
ಚಾಮರಾಜನಗರ, ಅ. 09 :-ಕೊಳ್ಳೇಗಾಲ ನಗರಸಭೆಯ ವಾರ್ಡ್ ಸಂಖ್ಯೆ 9ರ ಕೌನ್ಸಿಲರ್ ಸ್ಥಾನಕ್ಕೆ ಚುನಾವಣೆ ನಡೆಸುವ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ.ಕಾವೇರಿ ಅವರು ಇಂದು ಅಧಿಸೂಚನೆ ಹೊರಡಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಅಕ್ಟೋಬರ್ 16 ಕಡೆಯ ದಿನವಾಗಿದೆ. ನಾಮಪತ್ರ ಪರಿಶೀಲನೆ ಕಾರ್ಯವನ್ನು ಅಕ್ಟೋಬರ್ 17ರಂದು ನಡೆಸಲಾಗುತ್ತದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅಕ್ಟೋಬರ್ 20 ಕಡೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ ಅಕ್ಟೋಬರ್ 28ರಂದು ಬೆಳಿಗ್ಗೆ 7ರಿಂದ ಸಂಜೆ 5ಗಂಟೆಯವರೆಗೆ ನಡೆಸಲಾಗುತ್ತದೆ. ಮರು ಮತದಾನ ಇದ್ದಲ್ಲಿ ಅಕ್ಟೋಬರ್ 30ರಂದು ನಡೆಸಲಾಗುತ್ತದೆ. ಮತಗಳ ಎಣಿಕೆ ಕಾರ್ಯವು ಅಕ್ಟೋಬರ್ 31ರಂದು ಬೆಳಿಗ್ಗೆ 8ಗಂಟೆಗೆ ತಾಲ್ಲೂಕು ಕೇಂದ್ರದಲ್ಲಿ ಆರಂಭವಾಗಲಿದೆ. ಅಕ್ಟೋಬರ್ 31ರಂದೇ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ತಿಳಿಸಿದ್ದಾರೆ.




ಅ 10ರಂದು ನಗರದಲ್ಲಿ ವಿಶ್ವ ಮಾನಸಿಕ ಆರೋಗ್ಯ ಜಾಗೃತಿ ಜಾಥಾ
ಚಾಮರಾಜನಗರ, ಅ. 09 -ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ಹಾಗೂ ಬೀದಿ ನಾಟಕ ಪ್ರದರ್ಶನವನ್ನು ಅಕ್ಟೋಬರ್ 10ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಚಾಮರಾಜೇಶ್ವರ ದೇವಾಲಯದ ಬಳಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


ಅ.13 ರಿಂದ 16 ರವರೆಗೆ ಚಾಮರಾಜನಗರ ದಸರಾ ಮಹೋತ್ಸವ: ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳ ರಸದೌತಣ
ಚಾಮರಾಜನಗರ, ಅ. 09  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಜಿಲ್ಲೆಗೂ ವಿಸ್ತರಿಸಿರುವ ಚಾಮರಾಜನಗರ ದಸರಾ ಮಹೋತ್ಸವವು ಅಕ್ಟೋಬರ್ 13 ರಿಂದ 16 ರವರೆಗೆ ನಗರದ          ಚಾಮರಾಜೇಶ್ವರ ದೇವಾಲಯದ ಮುಂಭಾಗ ಅದ್ದೂರಿಯಾಗಿ ನಡೆಯಲಿದೆ.

ಅಕ್ಟೋಬರ್ 13 ರಂದು ಬೆಳಿಗ್ಗೆ 10 ಗಂಟೆಗೆ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯದೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು     ದಸರಾ ಮಹೋತ್ಸವಕ್ಕೆ  ಸಾಂಪ್ರದಾಯಿಕ ಚಾಲನೆ ನೀಡುವರು. ಅಂದು ಸಂಜೆ 5 ಗಂಟೆಗೆ ದಸರಾ ಕಾರ್ಯಕ್ರಮಕ್ಕೆ ಚಾಮರಾಜೇಶ್ವರ ದೇವಾಲಯದ ಮುಂಭಾಗ  ಜಿಲ್ಲಾ ಉಸ್ತುವಾರಿ ಸಚಿವರು ವಿಧ್ಯುಕ್ತವಾಗಿ ಚಾಲನೆ ನೀಡುವರು. ದಸರಾ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಎನ್. ಮಹೇಶ್ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡುವರು. 

ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ, ಶಾಸಕರಾದ  ಆರ್.ನರೇಂದ್ರ, ಸಿ.ಎಸ್ ನಿರಂಜನ್‍ಕುಮಾರ್,  ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ,  ಎಸ್.ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ  ಜೆ. ಯೋಗೀಶ್, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್ ದಯಾನಿಧಿ ಅವರು  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಅಕ್ಟೋಬರ್ 13 ರಿಂದ 16 ರವರೆಗೆ ಅಂದರೆ ನಾಲ್ಕು ದಿನಗಳ ಕಾಲ ಚಾಮರಾಜೇಶ್ವರ ದೇವಾಲಯ ಮುಂಭಾಗ ಹಾಕಲಾಗಿರುವ ವರ್ಣರಂಜಿತ ಬೃಹತ್ ವೇದಿಕೆಯಲ್ಲಿ ಸ್ಥಳೀಯ ಕಲಾವಿದರು, ಕಾಲೇಜು ವಿದ್ಯಾರ್ಥಿಗಳು, ರಾಜ್ಯ ಮಟ್ಟದ ಹೆಸರಾಂತ ಚಲನಚಿತ್ರ, ಸುಗಮ ಸಂಗೀತ ಕಲಾವಿದರು ಸಾಂಸ್ಕøತಿಕ ರಸದೌತಣ ಉಣಬಡಿಸಲಿದ್ದಾರೆ.

ಅಕ್ಟೋಬರ್ 13 ರಂದು ಸಂಜೆ 4.30 ರಿಂದ 4.50 ಗಂಟೆಯ ವರೆಗೆ ಬನ್ನೂರು ಗ್ರಾಮದ ರಂಗಸ್ವಾಮಿ ತಂಡದಿಂದ ನಗಾರಿ, 4.50 ರಿಂದ 5.20 ರವರಗೆ ಗುಂಡ್ಲುಪೇಟೆಯ ಬಿ. ಸಿದ್ದನಗೌಡ  ರವರಿಂದ ಹಿಂದೂಸ್ಥಾನಿ ಸಂಗೀತ, 5.20 ರಿಂದ 5.45 ರವರೆಗೆ ಬಿಳಿಗಿರಿರಂಗನ ಬೆಟ್ಟದ ಪುಷ್ಪಮಾಲೆ ಕಲಾ ಸಂಘದವರಿಂದ ಸೋಲಿಗರ ಗೊರುಕನ ನೃತ್ಯ ಕಾರ್ಯಕ್ರಮವಿದೆ.  ಸಂಜೆ 5.45 ರಿಂದ 6.45 ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ ಹೆಸರಿನಡಿ ಸಾಂಸ್ಕøತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 6.45 ರಿಂದ 10.30 ರವರೆಗೆ ಹೆಸರಾಂತ ಚಲನಚಿತ್ರ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಮತ್ತು ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ. 

ಅಕ್ಟೋಬರ್ 14 ರಂದು ಸಂಜೆ 4.30 ರಿಂದ 4.50 ಗಂಟೆಯ ವರೆಗೆ  ರಾಮಸಮುದ್ರದ ರಾಜಪ್ಪ ಮತ್ತು ತಂಡದವರಿಂದ ಜನಪದ ಸಂಗೀತ,  4.50 ರಿಂದ 5.20 ರವರಗೆ ರಾಮಸಮುದ್ರದ ಶ್ರೀ ಮಲೆ ಮಹದೇಶ್ವರ ಕಲಾತಂಡದಿಂದ ಬೀಸು ಕಂಸಾಳೆ,   5.20 ರಿಂದ 5.40 ರವರೆಗೆ ಯಳಂದೂರಿನ ಅರುಣ್ ಕುಮಾರ್ ತಂಡದಿಂದ ಭಾವಗೀತೆ, ಸಂಜೆ 5.40 ರಿಂದ 6 ಗಂಟೆಯ ರವರೆಗೆ ಚಾಮರಾಜನಗರ ನಗರದ ಶಾರದ ನೃತ್ಯ ಶಾಲೆ ಕಲಾವಿದರಿಂದ ಭರತನಾಟ್ಯ ಕಾರ್ಯಕ್ರಮ ಏರ್ಪಾಡಾಗಿದೆ. ಸಂಜೆ 6 ರಿಂದ 7 ಗಂಟೆಯ ವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ ಹೆಸರಿನಡಿ ಸಾಂಸ್ಕøತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 7 ರಿಂದ 8.15 ರವರೆಗೆ ಖ್ಯಾತ ಪ್ರಭಾತ್ ಕಲಾವಿದರು ನೃತ್ಯವೈಭವ ಪ್ರಸ್ತುತ ಪಡಿಸುವರು. 8.15 ರಿಂದ 10.30 ರವರೆಗೆ ಹೆಸರಾಂತ ಗಾಯಕಿ ಸಂಗೀತ ಕಟ್ಟಿ ಮತ್ತು ತಂಡದವರಿಂದ ನವರಸ ಗಾಯನ ಕಾರ್ಯಕ್ರಮ ನಡೆಯಲಿದೆ. 

ಅಕ್ಟೋಬರ್ 15 ರಂದು ಸಂಜೆ 4.30 ರಿಂದ 5 ಗಂಟೆಯ ವರೆಗೆ ಹನೂರಿನ ಕೆಂಪಮಹದೇಶ್ವರ ಸೋಲಿಗರ ನೃತ್ಯ ತಂಡದಿಂದ ಪಿನಾಶಿ ನೃತ್ಯ,  5 ರಿಂದ 5.30 ರವರಗೆ  ಗುಂಡ್ಲುಪೇಟೆಯ ನಾರಾಯಣ್ ಮತ್ತು ಪರಿವರ್ತನ ತಂಡದಿಂದ ತತ್ವಪದ ಹಾಗೂ ಜನಪದ ಸಂಗೀತ,  5.30 ರಿಂದ 5.45 ರವರೆಗೆ ಕೊಳ್ಳೇಗಾಲದ ಎಂ.ಸಿ ಸಿಂಚನ ಅವರಿಂದ ನೃತ್ಯ, 5.45 ರಿಂದ 6.05 ರವರೆಗೆ ಗುಂಡ್ಲುಪೇಟೆಯ ಮೋಹನ್ ಕುಮಾರ್ ಮತ್ತು ತಂಡದಿಂದ ಜಾನಪದ ನೃತ್ಯ, 6.05 ರಿಂದ 6.30 ರವರೆಗೆ ಚಾಮರಾಜನಗರದ ಮಹೇಶ್ ಮತ್ತು ತಂಡದಿಂದ ಜಾನಪದ ಸಂಗೀತ ಕಾರ್ಯಕ್ರಮ ಏರ್ಪಾಡಾಗಿದೆ.  6.30 ರಿಂದ 7.30 ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ ಹೆಸರಿನಡಿ ಸಾಂಸ್ಕøತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ. 7.30 ರಿಂದ 8 ಗಂಟೆ ವರೆಗೆ ಅಂಡಮಾನ್ ಮತ್ತು ನಿಕೋಬಾರ್ ದಕ್ಷಿಣವಲಯ ಸಾಂಸ್ಕøತಿಕ ಕೇಂದ್ರದವರಿಂದ ನಿಕೋಬಾರಿ ನೃತ್ಯ ಇರಲಿದೆ. ರಾತ್ರಿ 8 ರಿಂದ 10.30ರ ವರೆಗೆ ಮೈಸೂರಿನ ನಟನ ಕಲಾವಿದರಿಂದ ಚೋರ ಚರಣದಾಸ ನಾಟಕ ಪ್ರದರ್ಶನವಿದೆ.

ಅಕ್ಟೋಬರ್ 16 ರಂದು ಸಂಜೆ 4.30 ರಿಂದ 4.45 ಗಂಟೆಯ ವರೆಗೆ  ರಾಮಸಮುದ್ರದ ಆರ್.ಸಿ. ಸಿದ್ದರಾಜು ಮತ್ತು ತಂಡದವರಿಂದ ಡೋಲು ಕುಣಿತ, 4.45 ರಿಂದ 5 ರವರಗೆ ಗುಂಡ್ಲುಪೇಟೆಯ ಪೃಥ್ವಿ ಬುದ್ದಿಮಾಂಧ್ಯ ಶಾಲೆ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, 5 ರಿಂದ 5.30 ರವರೆಗೆ  ಮಲೆಯೂರು ಡಾ|| ಪ್ರೀತಮ್ ರವರಿಂದ ಸುಗಮ ಸಂಗೀತ ಮತ್ತು ದೇವರ ನಾಮ ಕಾರ್ಯಕ್ರಮವಿದೆ.   5.30 ರಿಂದ 6 ಗಂಟೆಯ ರವರೆಗೆ ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರದ ಎಂ. ಕೈಲಾಸಮೂರ್ತಿ ಮತ್ತು ತಂಡದಿಂದ ಜಾನಪದ ಗಾಯನ, 6 ರಿಂದ 6.30 ರವರೆಗೆ ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದ ಎಸ್. ಜೈಗುರು ಮತ್ತು ತಂಡದಿಂದ ಸುಗಮ ಸಂಗೀತ ಹಾಗೂ ಜಾನಪದ ನೃತ್ಯ ಕಾರ್ಯಕ್ರಮ ನಡೆಯಲಿದೆ. 6.30 ರಿಂದ 7.30 ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ ಹೆಸರಿನಡಿ ಸಾಂಸ್ಕøತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ. 7.30 ರಿಂದ 10.30ರ ವರೆಗೆ ಖ್ಯಾತ   ಗಾಯಕ ಹೇಮಂತ್ ಮತ್ತು ತಂಡದಿಂದ ಕನ್ನಡ ರಸ ಸಂಜೆ ಕಾರ್ಯಕ್ರಮವಿದೆ.

ನಾಲ್ಕು ದಿನಗಳ ಕಾಲವು ನಡೆಯಲಿರುವ ದಸರಾ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾಗರಿಕರೆಲ್ಲರೂ ಆಗಮಿಸಿ ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಾದ ಬಿ.ಬಿ ಕಾವೇರಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.



No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು