Thursday, 10 December 2020

ಮಾದಕ ವಸ್ತು ಚಟುವಟಿಕೆಗಳ ವಿರುದ್ದ ಕಟ್ಟೆಚ್ಚರ : ಅಕ್ರಮ ನಡೆಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ-ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ

 


ಮಾದಕ ವಸ್ತು ಚಟುವಟಿಕೆಗಳ ವಿರುದ್ದ ಕಟ್ಟೆಚ್ಚರ : ಅಕ್ರಮ ನಡೆಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ-ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ 


ಚಾಮರಾಜನಗರ, ಸೆಪ್ಟೆಂಬರ್ 16 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಗಾಂಜಾ ಬೆಳೆ ಸೇರಿದಂತೆ ಯಾವುದೇ ಮಾದಕ ವಸ್ತುಗಳ ಚಟುವಟಿಕೆಗಳಿಗೆ ಅವಕಾಶವಾಗದಂತೆ ಅಧಿಕಾರಿಗಳು ಕಟ್ಟೆಚ್ಚೆರ ವಹಿಸಿ ಅಕ್ರಮ ನಡೆಸುವವರ ವಿರುದ್ದ  ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಸೂಚನೆ ನೀಡಿದರು. 


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಡ್ರಗ್ಸ್ ದಂಧೆ ನಿಯಂತ್ರಣಾ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಯುವ ಜನಾಂಗವನ್ನು ತಪ್ಪು ದಾರಿಗೆ ಕರೆದೊಯ್ದು ಸಮಾಜದ ಸ್ವಾಸ್ತ್ಯ ಹಾಳುಮಾಡುವ ಮಾದಕ ವಸ್ತುಗಳಿಗೆ ಸಂಬಂಧಿಸಿದ ಯಾವುದೇ ವ್ಯವಹಾರ ಚಟುವಟಿಕೆಗಳು ಜಿಲ್ಲೆಯ ಯಾವುದೇ ಭಾಗದಲ್ಲಿ ನಡೆಯದಂತೆ ಅಧಿಕಾರಿಗಳು ನಿಗಾವಹಿಸಬೇಕು. ಇತ್ತೀಚೆಗೆ ಗಾಂಜಾ ಬೆಳೆದಿರುವ ಪ್ರಕರಣ ಬೇಧಿಸಲಾಗಿದೆ. ಹೀಗಾಗಿ ಕಂದಾಯ, ಅಬಕಾರಿ, ಅರಣ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಸಂಘಟಿತರಾಗಿ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು ವಿಶೇಷ ಕಣ್ಗಾವಲು ಇರಿಸುವಂತೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು. 


ಸರ್ಕಾರಿ ಜಮೀನಿರಲಿ ಅಥವಾ ಖಾಸಗಿಯವರ ಭೂಮಿಯೇ ಇರಲಿ ಎಲ್ಲ ಕಡೆ ಕಂದಾಯ ಅಧಿಕಾರಿಗಳು ನಿಗಾ ಇಟ್ಟಿರಬೇಕು. ಯಾವ ಬೆಳೆ ಬೆಳೆಯಲಾಗುತ್ತಿದೆ ಎಂಬ ಮಾಹಿತಿಯನ್ನು ಆಯ ಗ್ರಾಮಲೆಕ್ಕಿಗರಿಂದ ಮಾಹಿತಿ ಸಂಗ್ರಹಣೆ ಮಾಡಬೇಕು, ಅಕ್ರಮವಾಗಿ ಗಾಂಜಾ ಸೇರಿದಂತೆ ಯಾವುದೇ ಮಾದಕ ವಸ್ತುಗಳ ಬೆಳೆ ಬೆಳೆದಿರುವುದು ಕಂಡು ಬಂದಲ್ಲಿ ಕೂಡಲೇ ವರದಿ ಮಾಡಿ ಪ್ರಕರಣ ದಾಖಲಿಸಬೇಕು. ಆರ್.ಟಿ.ಸಿ ಹೊಂದಿರುವ ಮಾಲೀಕರ ವಿರುದ್ದವೇ ಮೊದಲು ಪ್ರಕರಣ ಹೂಡಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. 


ಕಾಡಂಚಿನ ಭಾಗ ಹಾಗೂ ಅರಣ್ಯ ಗಡಿ ಭಾಗದಲ್ಲಿ ವಿಶೇಷ ನಿಗಾವಹಿಸಬೇಕು. ಗಾಂಜಾ ಸೇರಿದಂತೆ ಯಾವುದೇ ಮಾದಕ ಅಕ್ರಮ ಚಟುವಟಿಕೆಗಳು ನಡೆಯದಂತೆ ಅರಣ್ಯ, ಪೊಲೀಸ್, ಅಬಕಾರಿ, ಇಲಾಖೆಗಳು ಗಸ್ತು ವ್ಯವಸ್ಥೆಯನ್ನು ತೀವ್ರಗೊಳಿಸಬೇಕು,  ಕಂದಾಯ ಇಲಾಖೆ ಅಧಿಕಾರಿಗಳಿಗೆ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳೂ ಸಹ ನೆರವು ನೀಡಬೇಕು. ತಾಲ್ಲೂಕು ಮಟ್ಟಲ್ಲಿ ಸ್ಕ್ವಾಡ್ ರಚಿಸಿ ಮಾದಕ ವಸ್ತುಗಳ ಚಟುವಟಿಕೆಗಳು ಎಲ್ಲಿಯೇ ಕಂಡು ಬಂದಲ್ಲಿ ಕೂಡಲೇ ಜಂಟಿ ಕಾರ್ಯಚರಣೆ ನಡೆಸಿ ಅಕ್ರಮದ ವಿರುದ್ದ ಕ್ರಮ ಜರುಗಿಸಬೇಕೆಂದು ಸೂಚಿಸಿದರು. 


        ಹೋಂ ಸ್ಟೇ, ರೆಸಾರ್ಟ್‍ಗಳ ಮೇಲೂ ಕಟ್ಟೆಚ್ಚರ ಇರಬೇಕು, ಹೊರಗಿನಿಂದ ಬರುವ ಜನರ ಮೇಲೆ ಕಣ್ಗಾವಲು ಇಡಬೇಕು, ಅಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ಇರಬೇಕು, ಅಂತರ ರಾಜ್ಯ ಚೆಕ್‍ಪೋಸ್ಟ್‍ಗಳು ಸೇರಿದಂತೆ ಇತೆರೆ ಚೆಕ್‍ಪೋಸ್ಟ್ ಗಳಲ್ಲಿಯೂ ತಪಾಸಣೆ ಕಾರ್ಯ ಚುರುಕುಗೊಳಿಸಬೇಕು. ಅಧಿಕಾರಿಗಳು ವ್ಯಾಪಕವಾಗಿ ಎಲ್ಲೆಡೆ ಭೇಟಿ ನೀಡಿ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. 


ಅಧಿಕಾರಿಗಳು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಜಾಗೃತಿ ಸಭೆ ನಡೆಸುವ ಮೂಲಕ ಜನರಿಗೆ ಅರಿವು ಮೂಡಿಸಬೇಕು, ಆರೋಗ್ಯ ಇಲಾಖೆ ನೆರವಿನೊಂದಿಗೆ ಮಾದಕ ವಸ್ತುಗಳ ಸೇವನೆಯಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಮನೋ ವೈದ್ಯರಿಂದಲೂ ಆಪ್ತ ಸಮಾಲೋಚನೆ ಇತರೆ ವಿಧಾನಗಳ ಮೂಲಕ ಜನರಿಗೆ ಮಾರ್ಗದರ್ಶನ ಮಾಡುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಸಲಹೆ ಮಾಡಿದರು. 


ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿತಾ ಬಿ ಹದ್ದಣ್ಣನವರ್ ಅವರು ಮಾತನಾಡಿ ಜಿಲ್ಲೆಯಲ್ಲಿ ಗಾಂಜಾ ಬೆಳೆಯುವವರ ವಿರುದ್ದ  ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಚಟುವಟಿಕೆ ನಡೆಯದಂತೆ ನಿಗಾವಹಿಸಿದ್ದು ಎಲ್ಲಾ ಅಕ್ರಮ ಕೃತ್ಯಗಳನ್ನು ಮಟ್ಟ ಹಾಕಲು ಸನ್ನದ್ಧರಾಗಿದ್ದೇವೆ ಎಂದು ಹೇಳಿದರು.


ಅಬಕಾರಿ ಉಪಆಯುಕ್ತರಾದ ಮುರುಳೀಧರ್, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಹಿರಿಯ ಅರಣ್ಯ ಅÀಧಿಕಾರಿಗಳಾದ ಬಾಲಚಂದ್ರ, ಸಂತೋಷ್‍ಕುಮಾರ್, ತಹಶೀಲ್ದಾರರಾದ ಚಿದಾನಂದ ಗುರುಸ್ವಾಮಿ, ಕೆ. ಕುನಾಲ್, ನಂಜುಂಡಯ್ಯ, ಸುದರ್ಶನ್, ವೈದ್ಯ ಅಧಿಕಾರಿಗಳಾದ ಡಾ. ರಾಜು, ಕೃಷಿ ಜಂಟಿ ನಿರ್ದೇಶಕರಾದ ಚಂದ್ರಕಲಾ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಿವಪ್ರಸಾದ್,  ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.     



ರೈತರಿಗೆ ಸಮರ್ಪಕವಾಗಿ ರಸಗೊಬ್ಬರ, ಸಹಾಯಧನ ತಲುಪಿಸಿ : ಅಧ್ಯಕ್ಷರಾದ ಎಂ. ಅಶ್ವಿನಿ ಸೂಚನೆ


ಚಾಮರಾಜನಗರ, ಸೆಪ್ಟೆಂಬರ್ 15 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ರೈತರಿಗೆ ಸರಿಯಾದ ಸಮಯಕ್ಕೆ ಸಮರ್ಪಕವಾಗಿ ರಸಗೊಬ್ಬರ ಸಿಗುವಂತಾಗಬೇಕು. ಹೂ, ಹಣ್ಣು, ತರಕಾರಿ ಬೆಳೆದ ಫಲಾನುಭವಿಗಳಿಗೆ ಪರಿಹಾರಧನ ಶೀಘ್ರವಾಗಿ ತಲುಪಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ಅಶ್ವಿನಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 


ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 


ಮಳೆಯ ಪ್ರಮಾಣ ಉತ್ತಮ ರೀತಿಯಲ್ಲಿ ಆಗಿದ್ದು, ರೈತರಿಗೆ ರಸಗೊಬ್ಬರವನ್ನು ತಲುಪಿಸಬೇಕು. ಹನೂರು ತಾಲೂಕಿನಲ್ಲಿ ಯೂರಿಯಾ ಕೊರತೆ ಕಂಡು ಬಂದಿದ್ದು, ಆ ಸಮಸ್ಯೆಯನ್ನು ಬೇಗ ನಿವಾರಿಸಬೇಕು. ಹಲವು ರೈತರಿಗೆ ಕೃಷಿ ಹೊಂಡದ ಸಹಾಯ ಧನವು ಬಿಡುಗಡೆಯಾಗಿಲ್ಲ. ಹೀಗಾಗಿ ಕೃಷಿ ಇಲಾಖೆಯ ಅಧಿಕಾರಿಗಳು ಫಲಾನುಭವಿಗಳಿಗೆ ಶೀಘ್ರ ಸೌಲಭ್ಯ ತಲುಪಿಸುವಂತೆ ಮಾಡಬೇಕು ಎಂದು ತಿಳಿದರು.


ಸಭೆಯ ಆರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸವರಾಜು, ಚೆನ್ನಪ್ಪ, ಕೆ.ಎಸ್.ಮಹೇಶ್, ಸಿ.ಎನ್. ಬಾಲರಾಜ್, ಮರಗದ ಮಣಿ ಸೇರಿದಂತೆ ಹಲವು ಸದಸ್ಯರು ರಸಗೊಬ್ಬರ ಅಗತ್ಯಕ್ಕೆ ತಕ್ಕಂತೆ ರೈತರಿಗೆ ದೊರೆಯಲು ಏರ್ಪಾಡು ಮಾಡಬೇಕು. ರಸಗೊಬ್ಬರ ದಾಸ್ತಾನು ಕುರಿತು ತಾಲ್ಲೂಕುವಾರು ಮಾಹಿತಿ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಸ್ಪಂಧಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಭೋಯರ್ ಹರ್ಷಲ್ ನಾರಾಯಾಣ್ ರಾವ್ ಅವರು ತಾಲ್ಲೂಕು ವಾರು ಮಾಹಿತಿ ಪ್ರತಿಯನ್ನು ಒದಗಿಸುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು. 


ಆರೋಗ್ಯ ಇಲಾಖೆ ವಿಷಯ ಕಲುರಿತ ಚರ್ಚೆ ವೇಳೆ ಎಂ. ಅಶ್ವಿನಿ ಅವರು ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ಕಾಡದಂತೆ ಕ್ರಮವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಟ್ಟಡ ನಿರ್ವಹಣೆ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆರೋಗ್ಯ ರಕ್ಷಾ ಸೇವಾ ಯೋಜನೆಯನ್ನು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು ಎಂದು ನಿರ್ದೇಶನ ನೀಡಿದರು. 


       ಆರೋಗ್ಯ ಇಲಾಖೆ ವಿಷಯ ಪ್ರಸ್ತಾಪ ವೇಳೆ ಕೋವಿಡ್-19 ನಿಯಂತ್ರಣಾ ಕ್ರಮಗಳಿಗೆ ಸಂಬಂಧಿಸಿದಂತೆ ಸಮರ್ಪಕ ಕ್ರಮಗಳನ್ನು ಅನುಷ್ಠಾನ ಮಾಡಬೇಕು. ಸ್ಯಾನಿಟೇಜಷನ್, ಸೂಕ್ತ ಸ್ಪಂದನೆ ಯಂತಹ ಕ್ರಮಗಳಿಗೆ ಮುಂದಾಗಬೇಕು, ಕೊರೊನಾ ವಾರಿಯರ್ಸ್‍ಗಳಾಗಿ ಕೆಲಸ ನಿರ್ವಹಿಸುವವರಿಗೆ ಸಹಾಯ ಧನವನ್ನು ಹೆಚ್ಚಿಸಬೇಕು ಎಂದು ಸದಸ್ಯರು ತಿಳಿಸಿದರು.


ಸದಸ್ಯರಾದ ಸಿ.ಎನ್. ಬಾಲರಾಜ್, ಕೆ.ಎಸ್. ಮಹೇಶ್, ಕೆರೆಹಳ್ಳಿ ನವೀನ್, ಬಿ.ಕೆ. ಬೊಮ್ಮಯ್ಯ, ಗುಂಡ್ಲುಪೇಟೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಜಿ.ಮಧುಶಂಕರ್ ಸೇರಿದಂತೆ ಹಲವು ಸದಸ್ಯರು ವೈದ್ಯಕೀಯ ಸೇವೆ ರಾತ್ರಿ ವೇಳೆಯು ಜನರಿಗೆ ಸಿಗಬೇಕಿದೆ ಎಂದರು. ಸದಸ್ಯರಾದ ಕಮಲ್ ನಾಗರಾಜ್ ಅವರು ಮಾತನಾಡಿ ಮುಳ್ಳೂರು ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರವನ್ನು ಶೀಘ್ರ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ದಾನಿಗಳು ಸ್ಥಳÀ ನೀಡಲು ಮುಂದೆ ಬಂದಿದ್ದು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದರು. ಸಭೆಯಲ್ಲಿ ಇತರೆ ವಿಷಯಗಳ ಕುರಿತು ಚರ್ಚಿಸಲಾಯಿತು. 


ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಖರೀದಿಸದಂತೆ ಚೂಡಾಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಮನವಿ

 

ಚಾಮರಾಜನಗರ, ಸೆಪ್ಟೆಂಬರ್ 15 (ಕರ್ನಾಟಕ ವಾರ್ತೆ):- ಚಾಮರಾಜನಗರ - ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಬಡಾವಣೆಗಳಲ್ಲಿ ಸಾರ್ವಜನಿಕರು ನಿವೇಶನ ಖರೀದಿಸಬಾರದೆಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಅವರು ಮನವಿ ಮಾಡಿದ್ದಾರೆ. 


ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಜಮೀನುಗಳಿಗೆ ಜಿಲ್ಲಾಧಿಕಾರಿ ಅವರಿಂದ ಭೂ ಪರಿವರ್ತನೆ, ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೆ, ಒಳಚರಂಡಿ, ವಿದ್ಯುತ್, ನೀರು ಸರಬರಾಜು, ರಸ್ತೆ, ಉದ್ಯಾನವನ ಹಾಗೂ ನಾಗರಿಕ ಸೌಕರ್ಯ ನಿವೇಶನ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸದಿರುವ ಅನಧಿಕೃತ ಬಡಾವಣೆಗಳಲ್ಲಿ ನಿವೇಶನಗಳನ್ನು ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ. 


ಜನಸಾಮಾನ್ಯರ ಮನಸ್ಥಿತಿಗನುಗುಣವಾಗಿ ಕಾನೂನಿಗೆ ವಿರುದ್ಧವಾಗಿ ಕೆಲವರು ಎಕರೆಗಟ್ಟಲೆ ಜಮೀನು ಖರೀದಿಸಿ ಯಾವುದೇ ಅನುಮತಿ ಇಲ್ಲದೇ ಭೂ ಪರಿವರ್ತನೆಯನ್ನು ಮಾಡದೆ ಗುಂಟೆ ರೂಪದಲ್ಲಿ ಮಾರಾಟ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಗುಂಟೆ ರೂಪದಲ್ಲಿ ಭದ್ರತೆಗೋಸ್ಕರ ರಿಜಿಸ್ಟರ್ ಮಾಡಿಸುತ್ತಿದ್ದು, ಇದರಿಂದ ನಿವೇಶನ ಕೊಂಡುಕೊಳ್ಳುವವರಿಗೆ ಮೂಲಭೂತ ಸೌಕರ್ಯಗಳು ದೊರೆಯುವುದಿಲ್ಲ. ಭೂ ಪರಿವರ್ತನೆ ಮಾಡದೆ ಗುಂಟೆ ರೂಪದಲ್ಲಿ ತೆಗೆದುಕೊಂಡು ಜಮೀನಿನಲ್ಲಿ ಕಟ್ಟಡ ನಿರ್ಮಿಸಿದರೆ ಅದು ಅನಧೀಕೃತವಾಗುತ್ತದೆ. ಇಂತಹ ಜಾಗಗಳಿಗೆ ಖಾತೆಯು ಕೂಡ ಅಗುವುದಿಲ್ಲ. ಬಡಾವಣೆ ನಿರ್ಮಾಣ ಮಾಡುವವರು ಗುಂಟೆ ರೂಪದಲ್ಲಿ ರಿಜಿಸ್ಟರ್ ಮೂಲಕ ತೆಗೆದುಕೊಂಡು ಗ್ರಾಮ ಪಂಚಾಯಿತಿ, ನಗರಸಭೆಯಲ್ಲಿ ಖಾತೆ ಮಾಡಿಸಿಕೊಂಡು ನಂತರ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಒಳಚರಂಡಿ, ರಸ್ತೆ, ವಿದ್ಯುಚ್ಛಕ್ತಿ ದೊರೆಯುತ್ತದೆ ಎಂದು ಮಾಹಿತಿ ನೀಡುತ್ತಿದ್ದಾರೆಂದು ಸಾರ್ವಜನಿಕರು ತಿಳಿಸುತ್ತಿದ್ದಾರೆ.


ಈ ಹಿನ್ನಲೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಚಾಮರಾಜನಗರ, ಗ್ರಾಮಾಂತರದ ಚನ್ನಿಪುರಮೋಳೆ, ರಾಮಸಮುದ್ರ, ಕರಿನಂಜನಪುರ, ಸೋಮವಾರಪೇಟೆ, ಗಾಳಿಪುರ, ಮೂಡ್ಲುಪುರ, ಮಲ್ಲಯ್ಯನಪುರ, ಉತ್ತುವಳ್ಳಿ, ಕಾಡಹಳ್ಳಿ, ಮಸಗಾಪುರ, ಮನಗಾನಹಳ್ಳಿ, ಮುಂಚನಹಳ್ಳಿ, ಬೂದಿತಿಟ್ಟು, ಮರಿಯಾಲ, ಗಂಗವಾಡಿ, ಮಾದಾಪುರ, ದೊಡ್ಡಮೋಳೆ, ಕೋಡಿಮೋಳೆ, ಹರದನಹಳ್ಳಿ, ಬಂಡಿಗೆರೆ, ಯಡಪುರ, ಶಿವಪುರ, ಚಂದಕವಾಡಿ, ಕೂಡ್ಲೂರು, ಬಸವನಪುರ ಹಾಗೂ ಹಂಡ್ರಕಳ್ಳಿ  ಗ್ರಾಮಗಳಲ್ಲಿ ನಿವೇಶನ ಕೊಂಡುಕೊಳ್ಳುವವರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಹಿತಿ ಪಡೆದುಕೊಳ್ಳಬೇಕು. ಜೊತೆಗೆ ಬಡಾವಣೆಯಲ್ಲಿನ ರಸ್ತೆ, ಒಳಚರಂಡಿ, ಕುಡಿಯುವ ನೀರಿನ, ವಿದ್ಯುಚ್ಛಕ್ತಿ ಸಂಪರ್ಕ ಹಾಗೂ ಅಭಿವೃದ್ಧಿಪಡಿಸಿದ ಪಾಕ್ರ್À ಮತ್ತು ಸಿ.ಎ. ನಿವೇಶನಗಳನ್ನು ಹೊಂದಿರುವ ಬಗ್ಗೆ ಖಚಿತಪಡಿಸಿಕೊಂಡು ನಿವೇಶನಗಳನ್ನು ಖರೀದಿಸಬೇಕೆಂದು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಮನವಿ ಮಾಡಿದ್ದಾರೆ.


ಒಂದು ವೇಳೆ ಇಂತಹ ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳನ್ನು ಖರೀದಿಸಿದಲ್ಲಿ, ಖರೀದಿದಾರರಿಗೆ ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಕಾನೂನು ತೊಡಕುಗಳು ಸಂಭವಿಸಲಿದ್ದು, ಕಾನೂನು ತೊಡಕಿಗೆ ಖರೀದಿದಾರರೇ ಹೋಣೆಗಾರರಾಗಲಿದ್ದಾರೆ.


ಬಡಾವಣೆ ನಿರ್ಮಾಣ ಮಾಡುವವರು ಕಾನೂನಾತ್ಮಕವಾಗಿ ನಿಯಮಗಳಿಗನುಸಾರವಾಗಿ ನಿರ್ಮಾಣ ಮಾಡಬೇಕು, ಮುಂದಿನ ದಿನಗಳಲ್ಲಿ ನಿವೇಶನ ಪಡೆದುಕೊಂಡವರಿಗೆ ಮೂಲಭೂತ ಸೌಕರ್ಯ ದೊರೆಕಿಸಿಕೊಡಬೇಕು, ಇದರಿಂದ ಬಡಾವಣೆಗಳಿಗೂ ಕೂಡ ಮೂಲಭೂತ ಸೌಕರ್ಯಗಳು ದೊರೆಯುವುದರ ಜೊತೆಗೆ ನಗರವು ಯೋಜನಾಬದ್ಧವಾಗಿ ಅಭಿವೃದ್ಧಿಗೊಳ್ಳುತ್ತದೆ ಇದಕ್ಕಾಗಿ ಸಾರ್ವಜನಿಕರು ಸಂಪೂರ್ಣವಾಗಿ ಸಹಕರಿಸಬೇಕೆಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.



ಕೊಳ್ಳೇಗಾಲ ನಗರಸಭಾ : ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡದಂತೆ ಸೂಚನೆ 


ಚಾಮರಾಜನಗರ, ಸೆಪ್ಟೆಂಬರ್ 15 (ಕರ್ನಾಟಕ ವಾರ್ತೆ):- ಕೊಳ್ಳೇಗಾಲ ನಗರಸಭೆಯ ವ್ಯಾಪ್ತಿಯಲ್ಲಿ ಬಿಡಾಡಿ ದನಗಳಿಂದ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ. ಹಾಗಾಗಿ ಬಿಡಾಡಿ ದನಗಳನ್ನು ಸಾಕಾಣಿಕೆ ಮಾಡುವವರು ತಮ್ಮ ತಮ್ಮ ಮನೆಗಳಲ್ಲಿಯೇ ಕಟ್ಟಿ ಹಾಕಿಕೊಂಡು ಸಾಕಬೇಕು ಎಂದು ನಗರಸಭೆ ಸೂಚಿಸಿದೆ. 


ದನ, ಕರು, ನಾಯಿ ಹಾಗೂ ಹಂದಿಗಳನ್ನು ಸಾಕುತ್ತಿರುವವರು ರಸ್ತೆಗಳಲ್ಲಿ ಬಿಡುತ್ತಿರುವುದರಿಂದ ಹಲವಾರು ಅಪಘಾತಗಳು ಸಂಭವಿಸುತ್ತಿದ್ದು ತುಂಬಾ ತೊಂದರೆಗಳಾಗುತ್ತಿರುವ ಬಗ್ಗೆ ಸಾರ್ವಜನಿಕರು ಮತ್ತು ನಗರಸಭಾ ಸದಸ್ಯರುಗಳಿಂದ ದೂರುಗಳು ಬಂದಿವೆ. ಇದರಿಂದಾಗಿ ಸಾಕಾಣಿಕೆ ಮಾಡುತ್ತಿರುವ ಮಾಲೀಕರು ರಸ್ತೆಗಳಿಗೆ ಸಾಕು ಪ್ರಾಣಿಗಳನ್ನು ಬಿಡಬಾರದು ಇಲ್ಲದಿದ್ದಲ್ಲಿ ಪ್ರಾಣಿಗಳನ್ನು ಮೈಸೂರಿನ ಪ್ರಿಂಜಾಪೋಲ್‍ಗೆ ಕಳುಹಿಸಲಾಗುತ್ತದೆ ಎಂದು ನಗÀರಸಭೆಯ ಪೌರಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ರೇಷ್ಮೆ ಕೃಷಿ ಪ್ರಶಸ್ತಿಗಾಗಿ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಂದ ಅರ್ಜಿ ಆಹ್ವಾನ 

 

ಚಾಮರಾಜನಗರ, ಸೆಪ್ಟೆಂಬರ್ 15 (ಕರ್ನಾಟಕ ವಾರ್ತೆ):- ರೇಷ್ಮೆ ಇಲಾಖೆಯಿಂದ 2019-20ನೇ ಸಾಲಿನ ರೇಷ್ಮೆ ಕೃಷಿ ಪ್ರಶಸ್ತಿಗಾಗಿ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಂದ  ಅರ್ಜಿ ಆಹ್ವಾನಿಸಲಾಗಿದೆ.


 ಅರ್ಜಿ ಸಲ್ಲಿಸುವ ನೂಲು ಬಿಚ್ಚಾಣಿಕೆದಾರರು ಕಡ್ಡಾಯವಾಗಿ ಪ್ರಸಕ್ತ ಸಾಲಿಗೆ ನಿಯಮಾನುಸಾರ ನೋಂದಾಯಿಸಿರಬೇಕು. ಕನಿಷ್ಟ 6 ಮಲ್ಟಿ ಎಂಡ್ ಬೇಸಿನ್ ಹೊಂದಿರಬೇಕು. ಸ್ವಯಂಚಾಲಿತ ನೂಲು ಬಿಚ್ಚಾಣಿಕೆದಾರರು ಸ್ವಯಂಚಾಲಿತ ಯಂತ್ರವನ್ನು ಸ್ಥಾಪಿಸಿರಬೇಕು. ರೇಷ್ಮೆ ಗೂಡು ಮಾರುಕಟ್ಟೆಯಲ್ಲಿಯೇ ಗೂಡು ಖರೀದಿಸಿರುವುದನ್ನು ದಾಖಲಾತಿಯೊಂದಿಗೆ ದೃಢೀಕರಿಸಬೇಕು. ವರ್ಷದಲ್ಲಿ ಖರೀದಿಸಿದ ಗೂಡನ್ನು ಸಂಪೂರ್ಣವಾಗಿ ನೂಲು ಬಿಚ್ಚಾಣಿಕೆಗೆ ಬಳಸಿರಬೇಕು. ಖರೀದಿಸಿದ ಗೂಡನ್ನು ಇತರೆ ಮಾರುಕಟ್ಟೆಗಳಲ್ಲಿ ಇತರರಿಗೆ ಮಾರಾಟ ಮಾಡಿರಬಾರದು. 


 ಹೆಚ್ಚಿನ ಮಾಹಿತಿಗಾಗಿ ಕೊಳ್ಳೇಗಾಲದ ರೇಷ್ಮೆ ವಿಸ್ತರಣಾಧಿಕಾರಿಗಳು, ಗೂಡಿನ ನಂತರದ ಚಟುವಟಿಕೆಗಳ ರೇಷ್ಮೆ ಸಹಾಯಕರ ನಿರ್ದೇಶಕರ ಕಚೇರಿ ಸಂಪರ್ಕಿಸಿ ಅಗತ್ಯ ಮಾಹಿತಿ ದಾಖಲಾತಿಗಳೊಂದಿಗೆ ಒದಗಿಸಿ ಅರ್ಜಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 25ರೊಳಗೆ ಸಲ್ಲಿಸಬೇಕು ಎಂದು ಕೊಳ್ಳೇಗಾಲದ ಗೂಡಿನ ನಂತರದ ಚಟುವಟಿಕೆಗಳ ರೇಷ್ಮೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಸೆ.21 ರಂದು ವಿಶ್ವಕರ್ಮ ಜಯಂತಿ

 

ಚಾಮರಾಜನಗರ, ಸೆಪ್ಟೆಂಬರ್ 15 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಸೆಪ್ಟೆಂಬರ್ 21ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಗುವುದು.


ಕೊರೊನಾ ವೈರಸ್ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಪುಷ್ಪಾರ್ಚನೆ ಮೂಲಕ ಸರಳವಾಗಿ ನಡೆಸಲಾಗುವುದೆಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೆ.ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


Wednesday, 25 November 2020

ಮಲೆಮಹದೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ : ಮುಖ್ಯಮಂತ್ರಿಯವರಾದ ಬಿ. ಎಸ್. ಯಡಿಯೂರಪ್ಪ (25-11-2020)




ಮಲೆಮಹದೇಶ್ವರ ಕ್ಷೇತ್ರಕ್ಕೆ ಮುಖ್ಯಮಂತ್ರಿಯವರ ಭೇಟಿ


ಚಾಮರಾಜನಗರ, ನ.25( ರಾಮಸಮುದ್ರ ಎಸ್.ವೀರಭದ್ರಸ್ವಾಮಿ)- ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಮುಖ್ಯಮಂತ್ರಿಯವರಾದ ಬಿ. ಎಸ್ .ಯಡಿಯೂರಪ್ಪರವರು ಇಂದು ಭೇಟಿ ನೀಡಿ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದರು. 
ಹೆಲಿಕ್ಯಾಪ್ಟರ್ ಮೂಲಕ ಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿಯವರನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು ಹಾಗೂ  ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್, ಶಾಸಕರಾದ ಆರ್ ನರೇಂದ್ರ, ಸಿ. ಎಸ್. ನಿರಂಜನ್ ಕುಮಾರ್, ಎನ್ ಮಹೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ. ಬಿ. ಕಾವೇರಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣ್‍ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ಮತ್ತಿತರ ಗಣ್ಯರು ಬರಮಾಡಿಕೊಂಡರು.

ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಮುಖ್ಯಮಂತ್ರಿಯವರು ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಸಾಲೂರು ಮಠಕ್ಕೆ ತೆರಳಿ ಹಿರಿಯ ಸ್ವಾಮೀಜಿಗಳ ಆರೋಗ್ಯ ವಿಚಾರಿಸಿದರು. ಶ್ರೀ ಮಠದ ವತಿಯಿಂದ 2021ನೇ ಸಾಲಿನ ದಿನದರ್ಶೀಕೆಯನ್ನು ಬಿಡುಗಡೆ ಮಾಡಿದರು. 
ತದನಂತರ ನಾಗಮಲೆ ಭವನದ ಸಭಾಂಗಣದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದರು. ನಂತರ ಜಿಲ್ಲಾ ರೈತ ಮುಖಂಡರು, ಪ್ರತಿನಿಧಿಗಳು ಹಾಗೂ ಕಬ್ಬು ಬೆಳೆಗಾರರ ಜೊತೆ ಸಮಾಲೋಚಿಸಿ ಅವರ ಅಹವಾಲುಗಳನ್ನು ಆಲಿಸಿದರು. ಇದೇ ವೇಳೆ ರೈತ ಮುಖಂಡರು ಸಲ್ಲಿಸಿದ ಬೇಡಿಕೆ ಹಾಗೂ ಮನವಿ ಪತ್ರವನ್ನು ಮುಖ್ಯಮಂತ್ರಿಗಳು ಸ್ವೀಕರಿಸಿದರು.

------------------
ಮಲೆಮಹದೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ : ಮುಖ್ಯಮಂತ್ರಿಯವರಾದ ಬಿ. ಎಸ್. ಯಡಿಯೂರಪ್ಪ

ಚಾಮರಾಜನಗರ, ನ .25(ವಿಎಸ್ಎಸ್)- ಜಿಲ್ಲೆಯ ಮಲೆಮಹದೇಶ್ವರ ಶ್ರೀ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿಯವರಾದ ಬಿ. ಎಸ್. ಯಡಿಯೂರಪ್ಪರವರು ತಿಳಿಸಿದರು. 

ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದ ಸಭಾಂಗಣದಲ್ಲಿಂದು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಮುಖ್ಯಮಂತ್ರಿಯವರು ಪ್ರಾಧಿಕಾರದ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. 

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ ಇಂದು ಪ್ರಾಧಿಕಾರದ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಲಾಗಿದೆ. ಮಲೆ ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಧಿಕಾರದ ವತಿಯಿಂದ 15 ಶಾಲೆಗಳನ್ನು ಗುರುತಿಸಲಾಗಿದೆ. ಈ ಶಾಲೆಗಳನ್ನು ದತ್ತು ತೆಗೆದುಕೊಂಡು ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿ ಶಾಲೆಗಳ ಸರ್ವಾಂಗೀಣ ಪ್ರಗತಿಗೆ ಒತ್ತು ನೀಡಲಾಗುವುದು ಎಂದರು. 

ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಮಾಡಿಕೊಡಲಾಗುವುದು. ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದೇನೆ. ಇದರಲ್ಲಿ ಈಗಾಗಲೇ ಪೂರ್ಣಗೊಂಡಿರುವ ಹಲವು ಕಾಮಗಾರಿಗಳು ಇವೆ. ಇನ್ನು ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು. 

ಪ್ರಾಧಿಕಾರದ ಸಭೆಯಲ್ಲಿ ಉಪಮುಖ್ಯಮಂತ್ರಿಯವರಾದ ಗೋವಿಂದ ಕಾರಜೋಳ, ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಸುರೇಶ್ ಕುಮಾರ್, ಸಾಲೂರು ಮಠದ ಶ್ರೀಗಳಾದ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳು, ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಶಾಸಕರಾದ ಆರ್ ನರೇಂದ್ರ, ಎನ್ ಮಹೇಶ್, ಸಿ ಪುಟ್ಟರಂಗಶೆಟ್ಟಿ, ಸಿ .ಎಸ್. ನಿರಂಜನ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಕೆ ಟಿ ಶ್ರೀಕಂಠೇಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ. ಬಿ. ಕಾವೇರಿ, ಜಿಲ್ಲಾಧಿಕಾರಿ ಡಾ ಎಂ ಆರ್ ರವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಸೇರಿದಂತೆ ಇತರರು ಹಾಜರಿದ್ದರು.






















 

Tuesday, 18 August 2020

ಕೊವೆಡ್ ಸೋಂಕು: ಮಾಜಿ ಶಾಸಕ ಗುರುಸ್ವಾಮಿ ಸಾವು. *ವರದಿ : ರಾಮಸಮುದ್ರ ಎಸ್.ವೀರಭದ್ರಸ್ವಾಮಿ*

            ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಸಿ. ಗುರುಸ್ವಾಮಿ (68)  ಅವರು ಕೋವಿಡ್ ಸೋಂಕಿನಿಂದ ಬುಧವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೋವಿಡ್ ದೃಢಪಟ್ಟಿದ್ದರಿಂದಾಗಿ ಆಗಸ್ಟ್ 5 ರಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಮೃತಪಟ್ಟಿದ್ದಾರೆ.

ಜಿ.ಪಂ. ಮಾಜಿ ಅಧ್ಯಕ್ಷೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಕೀಲೆ ನಾಗಶ್ರೀ ಪ್ರತಾಪ್ ಸೇರಿದಂತೆ ಇಬ್ಬರು ಪುತ್ರಿಯರು, ಪತ್ನಿ ಶೀಲಾ ಅವರನ್ನು ಗುರುಸ್ವಾಮಿ ಅಗಲಿದ್ದಾರೆ.

ವೃತ್ತಿಯಲ್ಲಿ ವಕೀಲರಾಗಿದ್ದ ಸಿ. ಗುರುಸ್ವಾಮಿಯವರು ಜನತಾ ಪಕ್ಷ, ಜನತಾದಳದಿಂದ ರಾಜಕೀಯ ಜೀವನ ಆರಂಭಿಸಿದ್ದರು. ಜನತಾದಳ ಇದ್ದಾಗ ಅವಿಭಜಿತ ಮೈಸೂರು ಜಿಲ್ಲೆಯ ಜಿಲ್ಲಾ ಪರಿಷತ್ ಸದಸ್ಯರಾಗಿದ್ದರು. ಹಿರಿಯ ರಾಜಕೀಯ ನಾಯಕ, ಕೇಂದ್ರದ ಮಾಜಿ ಸಚಿವ ರಾಜಶೇಖರಮೂರ್ತಿಯವರ ಶಿಷ್ಯರಾಗಿದ್ದರು. ರಾಜಶೇಖರಮೂರ್ತಿಯವರು ಬಿಜೆಪಿ ಸೇರಿದ ಸಂದರ್ಭದಲ್ಲಿ ಅವರನ್ನು ಅನುಸರಿಸಿ ಗುರುಸ್ವಾಮಿ ಸಹ ಬಿಜೆಪಿ ಸೇರಿದರು.

1999ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚಾಮರಾಜನಗರ ಕ್ಷೇತ್ರದಿಂದ ಗೆದ್ದು ಬಂದರು. ಎರಡು ಅವಧಿಗೆ ಗೆದ್ದು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ  ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರನ್ನು ಗುರುಸ್ವಾಮಿಯವರು ಸೋಲಿಸಿದ್ದು ಆಗ ದಾಖಲೆಯಾಗಿತ್ತು. ಕ್ಷೇತ್ರದ ಮೊದಲ ಹಾಗೂ ಏಕೈಕ ಬಿಜೆಪಿ ಶಾಸಕರೆಂಬ ಹೆಗ್ಗಳಿಕೆಯೂ ಅವರದೇ ಆಗಿತ್ತು. ನಂತರ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿಲ್ಲ.

1999-2004ರ ಅವಧಿ ಮುಗಿದ ನಂತರ ನಡೆದ ರಾಜಕೀಯ ಸ್ತಿತ್ಯಂತರಗಳಲ್ಲಿ ಗುರುಸ್ವಾಮಿಯವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಬಳಿಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಜಿಲ್ಲೆಯ ಪ್ರಭಾವಿ ಬಿಜೆಪಿ ಮುಖಂಡರಲ್ಲೊಬ್ಬರಾಗಿ, ಜನಾನುರಾಗಿ ಮುಖಂಡರಾಗಿ ಗುರುತಿಸಿಕೊಂಡಿದ್ದರು.

ಮೃತರ ಅಂತ್ಯಕ್ರಿಯೆ ಅವರ ಸ್ವಗ್ರಾಮ ತಾಲೂಕಿನ ಯಾನಗಹಳ್ಳಿಯ ತೋಟದಲ್ಲಿ ಕೋವಿಡ್ ಶಿಷ್ಟಾಚಾರ ದಂತೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Thursday, 16 July 2020

ಹೆಬ್ಬೆಟ್ಟು ಪತ್ರಕರ್ತರ ಹಾವಳಿಗೆ ಕಡಿವಾಣ ಇಲ್ಲವೇ?

ಸ್ನೇಹಿತರೊಬ್ಬರ ಅಂಕಣ.
೯೪೮೦೦೩೦೯೮೦ ನಾವು ನಕಲಿಸಿ ಹಾಕಿದ್ದೇವೆ.


ಹೆಬ್ಬೆಟ್ಟು ಪತ್ರಕರ್ತರ ಹಾವಳಿಗೆ ಕಡಿವಾಣ ಇಲ್ಲವೇ?

ನಕಲಿ ಪತ್ರಕರ್ತರನ್ನು ಪೋಷಿಸುತ್ತಿರುವ ಪತ್ರಕರ್ತರ ಸಂಘಗಳು, ಭ್ರಷ್ಟ ಅಧಿಕಾರಿಗಳು, ಜನಪ್ರತಿನಿಧಿಗಳು

ಪತ್ರಕರ್ತರು ಎಂದರೆ, ಭ್ರಷ್ಟಾಚಾರವನ್ನು ಎತ್ತಿಹಿಡಿಯುವ ಹೋರಾಟಗಾರರು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಸಮಾಜದ ರಕ್ಷಕರು ಎನ್ನುವುದು ಜನಸಾಮಾನ್ಯರ ತಿಳಿವಳಿಕೆಯಾಗಿತ್ತು. ಆದರೆ, ಪತ್ರಕರ್ತರ ಶ್ರೇಷ್ಠತೆಯನ್ನು ಇನ್ನುಮುಂದೆ ಚಲನಚಿತ್ರಗಳಲ್ಲಿ ಮಾತ್ರ ಕಾಣಲು ಸಾಧ್ಯ. ನಿಜ ಜೀವನದಲ್ಲಿ ಅಸಾಧ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಜನಪರವಾಗಿ ಮತ್ತು ಸಮಾಜದ ಅಭಿವೃದ್ಧಿಗೆ ಇವರು ಕೆಲಸ ಮಾಡುವುದಾದರೆ ಇವರನ್ನು ಸ್ವಾಗತಿಸಬಹುದು. ಆದರೆ, ಬಹುತೇಕ ಪತ್ರಕರ್ತರು ಹೆಬ್ಬೆಟ್ಟು ಪತ್ರಕರ್ತರು, ಮೊಬೈಲ್ ಪತ್ರಕರ್ತರು ಆಗಿದ್ದಾರೆ. ಒಂದು ವಾಸ್ತವ ಸುದ್ದಿಯನ್ನು ತಮ್ಮ ಲೇಖನಿ ಮೂಲಕ ಪತ್ರಿಕೆಗೆ ಬರೆಯಲು ಬರವಣೀಗೆಯೇ ಗೊತ್ತಿಲ್ಲದ ರೋಲ್‌ಕಾಲ್ ಪತ್ರಕರ್ತರ ಹಾವಳಿ ಸಮಾಜದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಅಲ್ಲದೇ ಮೊಬೈಲ್ ಹಿಡಿದು ದೃಶ್ಯಗಳನ್ನು ಸೆರೆ ಹಿಡಿದು ಅದನ್ನು ಯಥಾವತ್ತಾಗಿ ಯು ಟ್ಯೂಬ್ ಚಾನಲ್‌ಗಳಲ್ಲಿ ಪ್ರಸಾರ ಮಾಡಿ ಅದನ್ನು ಸುದ್ದಿ ಮಾಡಿದ ವ್ಯಕ್ತಿಗಳ ಮೊಬೈಲ್‌ಗಳಿಗೆ ಕಳಿಸಿ ಹಣಕ್ಕೆ ಬೇಡಿಕೆ ಇಡುವವರ ಸಂಖ್ಯೆಯೂ ಕಡಿಮೆ ಏನಲ್ಲ.
ಪತ್ರಿಕೋದ್ಯಮದ ಗಂಧ ಗಾಳಿ, ಸಭ್ಯತೆ, ನೀತಿ, ನಿಯಮ ಯಾವುದೂ ಗೊತ್ತಿಲ್ಲದ ಅಥವಾ ಕನಿಷ್ಠ ವಿದ್ಯಾರ್ಹತೆಯೂ ಇಲ್ಲದ ಕೆಲವು ವ್ಯಕ್ತಿಗಳು, ಯುವಕರು ಸುಲಭವಾಗಿ ಹಣ ಮಾಡಲು, ಅಧಿಕಾರಿಗಳನ್ನು ಬೆದರಿಸಿ ತಮ್ಮ ಕೆಲಸ ಮಾಡಿಸಿಕೊಳ್ಳಲು ರಾಜಕಾರಣಿಗಳ ಬಳಿ ಎಂಜಲು ಕಾಸಿಗೆ ಕಾಯುತ್ತ ಪತ್ರಕರ್ತನ ವೇಷ ಧರಿಸಿರುವುದು ಎಲ್ಲೆಡೆ ಕಂಡುಬರುತ್ತಿದೆ.
ಯಾರು ಇವರನ್ನು ಪೋಷಿಸುತ್ತಿರುವುದು ಎಂಬ ಹುಡುಕಾಟ ನಡೆಸಿದರೆ ನಮಗೆ ಆಶ್ವರ್ಯವೇ ಕಾದಿರುತ್ತದೆ. ಬಹುತೇಕ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರೇ ಇಂತಹ ನಕಲಿ ಪತ್ರಕರ್ತರನ್ನು ಪೋಷಿಸುತ್ತಿದ್ದಾರೆ. ಒಂದು ತಾಲ್ಲೂಕಿನಲ್ಲಿ ಬರವಣಿಗೆ ಗೊತ್ತಿರುವ, ಪತ್ರಿಕೋದ್ಯಮ ಕಲಿತ ವಿದ್ಯಾವಂತರು ಮತ್ತು ಸಮಾಜಮುಖಿಯಾಗಿ ಕೆಲಸ ಮಾಡುವ ಮೂರ್‍ನಾಲ್ಕು ಪತ್ರಕರ್ತರನ್ನು ಮಾತ್ರ ನಾವು ಕಾಣಬಹುದು. ಒಟ್ಟಾರೆ ಒಂದು ತಾಲ್ಲೂಕಿನಲ್ಲಿ ೧೦ ರಿಂದ ೧೫ ಜನ ಪತ್ರಕರ್ತರು ಇದ್ದರೆ, ಪತ್ರಕರ್ತರ ಸಂಘಗಳು ಕನಿಷ್ಠ ೪ ಇರುತ್ತವೆ. 
ಇದಕ್ಕೆ ಪತ್ರಕರ್ತರಲ್ಲಿನ ಬದ್ಧತೆಯ ಕೊರತೆ, ಸ್ವಾರ್ಥ, ದ್ವೇಷ, ಗುಂಪುಗಾರಿಕೆ ಮತ್ತು ರಾಜಕಾರಣಿಗಳ ಸಖ್ಯ ಪ್ರಮುಖ ಕಾರಣ ಎನ್ನಬಹುದು. ಕೆಲವು ವರ್ಷಗಳಿ ಹಿಂದೆ ಇಡೀ ರಾಜ್ಯದಲ್ಲಿ ಪತ್ರಕರ್ತರನ್ನು ಪ್ರತಿನಿಧಿಸುವ ಒಂದು ಸಂಘ ಮಾತ್ರ ಇತ್ತು. ಈ ಸಂಘಕ್ಕೆ ಸೇರಲು ಒಂದಷ್ಟು ನಿಯಮಾವಳಿ ರೂಪಿಸಲಾಗಿತ್ತು. ಆದರೆ, ಇಂತಹ ಸಂಘದಲ್ಲಿ ಅರ್ಹತೆ ಇರುವ ಪತ್ರಕರ್ತರಿಗೆ ಸದಸ್ಯತ್ವ ಕೊಡಲು ನಿರಾಕರಣೆ ಮಾಡಿದ ಕಾರಣ ಮತ್ತೊಂದು ಸಂಘ, ಮಗದೊಂದು ಸಂಘಗಳ ಹುಟ್ಟಿಗೆ ಕಾರಣವಾಯಿತು. ಇಂತಹ ಎಮರ್ಜೆನ್ಸಿ ಸಂಘಗಳಲ್ಲಿ ಸದಸ್ಯತ್ವ ಪಡೆಯಲು ಸದಸ್ಯರ ಸಂಖ್ಯೆ ಹೆಚ್ಚಿಸುವ ಕಾರಣದಿಂದ ಸದಸ್ಯತ್ವ ಪಡೆಯಲು ಬೇಕಿದ್ದ ಕಠಿಣ ನಿಯಮಗಳನ್ನು ಸಡಿಲಗೊಳಿಸಲಾಯಿತು.
ನಂತರ ಇಂತಹ ಸಂಘಗಳಲ್ಲೂ ಒಡಕು ಮೂಡಿದ ಕಾರಣ ಪತ್ರಕರ್ತರ ಸಂಘಗಳು ನಾಯಿ ಕೊಡೆಗಳಂತೆ ಹೆಚ್ಚಿ ಹಾದಿ ಬೀದಿಯಲ್ಲಿ ತಿರುಗಾಡುವ ಪುಂಡರು, ಪೋಕರಿಗಳು ಪತ್ರಕರ್ತರ ವೇಷ ಧರಿಸಲು ಸ್ವಾರ್ಥ ಪತ್ರಕರ್ತರೇ ಕಾರಣ ಎನ್ನುವುದು ಕಹಿ ಸತ್ಯ.
ನೂರಾರು ಯು ಟ್ಯೂಬ್ ಚಾನಲ್‌ಗಳು, ಕೇವಲ ಎರಡು ಪುಟದ ೩೦ ಪತ್ರಿಕೆಗಳನ್ನು ಪ್ರಿಂಟ್ ಮಾಡಿ ಸರ್ಕಾರಿ ಕಚೇರಿಗಳಿಗೆ ತಲುಪಿಸುವ ಹತ್ತಾರು ಹೆಬ್ಬೆಟ್ ಸಂಪಾದಕರು, ಇಂತಹ ಲೋಕಲ್ ಪತ್ರಿಕೆಯ ಲೋಕಲ್ ವರದಿಗಾರರು. ಹೀಗೆ ಒಂದು ಜಿಲ್ಲಾ ಕೇಂದ್ರದಲ್ಲಿ ೩೦ ಲೋಕಲ್ ಪತ್ರಿಕೆಗಳು ಪ್ರಿಂಟ್ ಆದರೆ, ಒಂದು ತಾಲ್ಲೂಕಿನಲ್ಲಿ ೩೦ ಲೋಕಲ್ ವರದಿಗಾರರು ಮತ್ತು ರಾಜ್ಯಮಟ್ಟದ ಪತ್ರಿಕೆಗಳ ಹತ್ತು ಹದಿನೈದು ವರದಿಗಾರರು, ಯುಟ್ಯೂಬ್ ಚಾನಲ್‌ಗಳ ಕ್ಯೂಟ್ ವರದಿಗಾರ ಹಿಂಡೇ ಇರುತ್ತದೆ. ಇದು ಖಂಡಿತಾ ತಪ್ಪಲ್ಲ. ಆದರೆ, ಒಂದು ಸುದ್ದಿ ಮಾಡಲು ಇಂತಿಷ್ಠು ಹಣ ನೀಡಬೇಕು ಎನ್ನುವ ಅಲಿಖಿತ ನಿಯಮ ರಾಜಕಾರಣಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ.
ಕಂಡು ಕೇಳರಿಯದ ಪತ್ರಿಕೆಗಳ ಐಡಿ ಕಾರ್ಡ್, ವಿಸಿಟಿಂಗ್ ಕಾರ್ಡ್‌ಗಳನ್ನು ಇಟ್ಟುಕೊಂಡು, ದಪ್ಪ ದಪ್ಪ ಅಕ್ಷರಗಳಲ್ಲಿ ತಮ್ಮ ಕಾರು, ಬೈಕ್‌ಗಳ ಮುಂಭಾಗ ಪ್ರೆಸ್ ಎಂದು ಬರೆಸಿಕೊಂಡು ಸರ್ಕಾರಿ ಕಚೇರಿಗಳಲ್ಲಿ ದಾಳಿ ಇಡುವುದು, ಅಧಿಕಾರಿಗಳನ್ನು ಬೆದರಿಸಿ ಹಣ ಪೀಕುವುದು ಸರ್ವೆ ಸಾಮಾನ್ಯವಾಗಿದೆ. ಕೆಲವು ಉತ್ತಮ, ಪ್ರಾಮಾಣಿಕ ಅಧಿಕಾರಿಗಳಿಗೆ ಸ್ಥಳೀಯ ಪತ್ರಕರ್ತರು ನುಂಗಲಾರದ ತುತ್ತಾದರೆ, ಭ್ರಷ್ಟ ಅಧಿಕಾರಿಗಳಿಗೆ ಇಂತಹ ನಕಲಿ ಪತ್ರಕರ್ತರು ರಕ್ಷಕರಾಗಿದ್ದಾರೆ. 

ಯಾವುದೇ ಸಂಘ ಸಂಸ್ಥೆಯವರು, ಸಣ್ಣಪುಟ್ಟ ಒಂದು ಕಾರ್ಯಕ್ರಮಕ್ಕೆ ೧೦ ಸಾವಿರ ರೂ. ಖರ್ಚು ಮಾಡಿದರೆ, ಈ ಕಾರ್ಯಕ್ರಮಕ್ಕೆ ಅಹ್ವಾನವಿಲ್ಲದೆ ಬರುವ ಪತ್ರಕರ್ತರಿಗೆ ೨೦ ಸಾವಿರ ರೂ. ಎತ್ತಿಡಬೇಕು. ಕಾರ್ಯಕ್ರಮದ ಆಯೋಜಕರು ಬೇಕಂತಲೇ ಇಂತಹವರಿಗೆ ಆಹ್ವಾನ ನೀಡುವುದಿಲ್ಲ. ಆದರೆ, ಕಳ್ಳ ಬೆಕ್ಕು ಎಲ್ಲಿ ಹಾಲಿದೆ ಎನ್ನುವುದು ಪತ್ತೆ ಮಾಡುವ ಹಾಗೆ ನಕಲಿ ಪತ್ರಕರ್ತರು ಯಾವ ಕಡೆ ಕಾರ್ಯಕ್ರಮ ನಡೆಯುತ್ತಿದೆ ಎನ್ನುವುದನ್ನು ಕ್ಷಣ ಮಾತ್ರದಲ್ಲಿ ಪತ್ತೆ ಮಾಡುತ್ತಾರೆ. ತಮಗೆ ಆಹ್ವಾನವಿಲ್ಲದಿದ್ದರೂ ಕಾರ್ಯಕ್ರಮದ ಆಯೋಜಕರು ಕಂಡರೆ ಮುಗುಳ್ನಕ್ಕು ಕೂರುತ್ತಾರೆ. ಕಾರ್ಯಕ್ರಮ ಮುಗಿದ ಬಳಿಕ ಎಲ್ಲರೂ ಎದ್ದು ಹೋದರೂ ಈ ನಕಲಿ ಪತ್ರಕರ್ತರು ಮಾತ್ರ ಜಗ್ಗುವುದಿಲ್ಲ. ಏನಾದರೂ ವಸೂಲಿ ಮಾಡಿಕೊಂಡೇ ಹೋಗುತ್ತಾರೆ. ಈ ವೇಳೆ ಆಯೋಜಕರು ಏನೋ ಪಾಪ ಬಂದಿದ್ದಾರೆ ಎಂದು ಒಂದಿಬ್ಬರಿಗೆ ಹಣ ಕೊಡಲು ಮುಂದಾದರೂ ನಕಲಿ ಪತ್ರಕರ್ತರು ಕಾಗೆಗಳ ಹಾಗೆ ಮುತ್ತಿಕೊಂಡು ತಮಗೂ ಕೊಡಿ ಎಂದು ಬಾಯಿ ಬಿಟ್ಟೆ ಕೇಳುವುದು ನಡೆಯುತ್ತದೆ. ಒಬ್ಬನಿಗೆ ಕೊಟ್ಟು ಮತ್ತೊಬ್ಬರಿಗೆ ಕೊಡಲಿಲ್ಲ ಎಂದರೆ ಮುನಿಸು, ನೋಡಿ ಏನ್ಮಾಡ್ತೀವಿ ಎನ್ನುವ ಧಮಕಿ, ಕಾರ್ಯಕ್ರಮದ ವಿರುದ್ಧ ಸುದ್ದಿ ಮಾಡುವುದು, ತೆಗಳುವುದು, ನಡೆಯುತ್ತಿದೆ. ಇದು ಪತ್ರಕರ್ತರಿಗೆ ಶೋಭೆ ತರುವುದಿಲ್ಲ ಎನ್ನುವುದು ಗೊತ್ತಿದ್ದರೂ ಸಹ ಸುಖಾ ಸುಮ್ಮನೆ ಒಂದು ಕಾರ್ಯಕ್ರಮಕ್ಕೆ ಹೋಗಿ ಪೆನ್ನು ಹಿಡಿದು ಹಾಳೆಯ ಮೇಲೆ ಗೀಜುವ ನಾಟಕವಾಡಿದರೆ, ಅಥವಾ ಮೊಬೈಲ್ ಹಿಡಿದು ಕಾರ್ಯಕ್ರಮವನ್ನು ಚಿತ್ರೀಕರಿಸುಂತೆ ತೋರ್ಪಡಿಸಿದರೆ ಸಾಕು. ಐನೂರು ಗ್ಯಾರಂಟಿ ಇರುವಾಗ ಯಾವುದೇ ಮಾತು ಮಾರ್ಗಕ್ಕೆ ಜಗ್ಗದ ಭಂಡ ಪತ್ರಕರ್ತರ ಪಡೆಯೇ ಹಣ ಮಾಡುವ ಅಕ್ರಮ ದಂಧೆಗೆ ನಿಂತಿದೆ. 
ಇಂತಹ ಪತ್ರಕರ್ತನ ಸೋಗಿನಲ್ಲಿರುವ ಹಲವಾರು ವಿಷಜಂತುಗಳು ಸಮಾಜದ ಅಭಿವೃದ್ಧಿಗೆ ಮಾರಕವಾಗಿದ್ದಾರೆ. ಯವುದೇ ಕಾಮಗಾರಿಯ ಗುದ್ದಲಿ ಪೂಜೆ ಅಥವಾ ಉದ್ಘಾಟನೆಯಾಗಲಿ ಅದರ ಕಾರ್ಯಕ್ಷಮತೆ, ಗುಣಮಟ್ಟ ಪರೀಕ್ಷಿಸಲು ಯಾವುದೇ ಪತ್ರಕರ್ತರು ಮುಂದಾಗುವುದಿಲ್ಲ. ಅಥವಾ ತನಿಖಾ ವರದಿ ಮಾಡುವುದಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಅಥವಾ ಗುತ್ತಿಗೆದಾರರು ಕೊಡುವ ಭಕ್ಷೀಸಿಗೆ ಕೈ ಒಡ್ಡಿ ಅಕ್ರಮ ಅಥವಾ ಕಳಪೆ ಕಾಮಗಾರಿಗಳನ್ನು ಕಂಡೂ ಕಾಣದಂತೆ ಹೊರಟುಹೋಗುತ್ತಾರೆ.
ಕೆಲವು ರಾಜಕಾರಣಿಗಳು ತಮ್ಮ ರಕ್ಷಣೆಗೆ ಪತ್ರಕರ್ತರನ್ನು ಸಾಕುತ್ತಿದ್ದಾರೆ. ಯಾರಾದರು ಇವರ ವಿರುದ್ಧ ದನಿ ಎತ್ತಿದರೆ ಅಂತಹವರ ದನಿಯನ್ನು ಬೇರೆ ರೀತಿಯಲ್ಲಿ ಅಡಗಿಸಲಾಗುತ್ತದೆ.
ಜತೆಗೆ ಕೆಲವು ಭ್ರಷ್ಟ ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳ ಕೃಪಾಪೋಷಣೆಯಲ್ಲಿ ನಡೆಯುವ ಇಂತಹ ಯು ಟ್ಯೂಬ್ ಚಾನಲ್‌ಗಳು, ಓನ್ಲಿ ಥರ್ಟಿ ಪ್ರಿಂಟ್ ಆಗುವ ಡರ್ಟಿ ಪೇಪರ್‌ಗಳಿಗೆ ಕಡಿವಾಣ ಹಾಕುವುದು ಹೇಗೆ ಎನ್ನುವುದನ್ನು ವಿಚಾರ ಮಾಡಬೇಕಿದೆ.
ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೋಲಿಸ್ ವರಿಷ್ಟಾಧಿಕಾರಿಗಳು ಇಂತಹ ನಕಲಿ ಪತ್ರಕರ್ತರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ವೃತ್ತಿನಿರತ ಪತ್ರಕರ್ತರ ಆತ್ಮಗೌರವವನ್ನು ಹೆಚ್ಚಿಸಬೇಕಿದೆ. 


ಬರಹ:
ದಾವಲಸಾಬ ತಾಳಿಕೋಟಿ
ಪತ್ರಕರ್ತರು 
ಗಜೇಂದ್ರಗಡ ಜಿಲ್ಲಾ ಗದಗ

Saturday, 28 March 2020

ಐಜಿಪಿ, ಅವರೆ,ನಿಮಗೊಂದು ಪ್ರಶ್ನೆ? ಅಂತಿಮ ಸಾಲಿನಲ್ಲಿದೆ. ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ಲೋಪ.. ೭ ಮಂದಿ ಪೊಲೀಸರ ಅಮಾನತು. 29-03-2020

ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ಲೋಪ.. ೭ ಮಂದಿ ಪೊಲೀಸರ ಅಮಾನತು. 

 *ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ*

ಚಾಮರಾಜನಗರ: ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು 7 ಮಂದಿ ಪೊಲೀಸರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಚಾಮರಾಜನಗರ ಗ್ರಾಮಾಂತರ ಠಾಣೆಯ ಎಎಸ್ಐ ಕೂಸಪ್ಪ, ಸೈಯದ್ ರಫಿ, ಪ್ರಸಾದ್, ಅಬ್ದುಲ್ ಖಾದರ್ ಹಾಗೂ ಚಾಮರಾಜನಗರ ಪೂರ್ವ ಠಾಣೆಯ ಮಹಾದೇವಸ್ವಾಮಿ, ಮಹೇಶ್ ಡಿವೈಎಸ್ಪಿ ಕಚೇರಿಯ ರೇವಣ್ಣಸ್ವಾಮಿ ಅಮಾನತುಗೊಂಡ ನೌಕರರಾಗಿದ್ದಾರೆ.

ಹೆಗ್ಗವಾಡಿ ಕ್ರಾಸ್ ಚೆಕ್ ಪೊಸ್ಟ್ ಅಲ್ಲಿ ಕರ್ತವ್ಯ ಲೋಪ ಎಸಗಿ, ಪೂರ್ವಾನುಮತಿ ಇಲ್ಲದೇ ಹೆಚ್ಚು ವಾಹನಗಳನ್ನು ಬಿಟ್ಟಿದ್ದಾರೆಂದು ಆರೋಪಿಸಿ ಜಿಲ್ಲಾದಿಕಾರಿಗಳು  ಕಂದಾಯ ವಿಭಾಗದ ೬ ನೌಕರರನ್ನು ಶನಿವಾರ ಡಿಸಿ ಅಮಾನತುಗೊಳಿಸಿದ್ದರು. ಅದರ ಬೆನ್ನ ಹಿಂದೆಯೆ ಈಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲೂ ಅಮಾನತ್ತು ಆಗಿದೆ.                                      .             
 ಪುಣಜನೂರು ಚೆಕ್ ಪೊಸ್ಟ್ ನಲ್ಲೂ ಅದೇ ವಾಹನಗಳು ಸಾಗಿದೆ. ಅಲ್ಲು ಕರ್ತವ್ಯಲೋಪವಾಗಿದ್ದು ಅಂದೆ ಇಲಾಖಾ ಸಿಬ್ಬಂದಿಗಳನ್ನ ಅಮಾನತು ಮಾಡಬೇಕಿತ್ತು ಆದರೆ ಇಂದು ತಡರಾತ್ರಿ ಅಮಾನತ್ತಿನ ಆದೇಶ ಹೊರಡಿಸಿದ್ದಾರೆಂದು ತಿಳಿದುಬಂದಿದೆ.  ಮಾಹಿತಿ ಲಬ್ಯವಾದ ಪ್ರಕಾರ ಮೀನು ಹೊತ್ತ ಸಾಗಿದ್ದ ಏಳೆಂಟು ವಾಹನಗಳು ಪುಣಜನೂರು ಸಾಗಿ ತಮಿಳುನಾಡಿಗೆ ನುಗ್ಗುತ್ತಿದ್ದಂತೆ ತಮಿಳುನಾಡಿನ ಪೊಲೀಸರು ತಡೆದು ಕರ್ನಾಟಕ ಭಾಗಕ್ಕೆ ಕಳುಹಿಸಿ ಸಿಎಸ್ ಅವರಿಗೆ ವರದಿ ನೀಡಿದ್ದರು ಎಂದು ತಿಳಿದುಬಂದಿದೆ.  ಇದೆಲ್ಲ ಆದ ಮೇಲೆ ವಿಚಾರಣೆ ನಡೆಸಿದ ಚಾಮರಾಜನಗರ ಎಸ್ಪಿ ಅವರು ಅಮಾನತ್ತಿನ ಆದೇಶ ಹೊರಡಿಸಿದ್ದಾರೆ. 
 ಹೆಗ್ಗವಾಡಿ ಚೆಕ್ ಪೊಸ್ಟ್ ಗ್ರಾಮಾಂತರ ವ್ಯಾಪ್ತಿಗೂ, ಪುಣಜನೂರು ಪೂರ್ವ ಗ್ರಾಮಾಂತರ ಠಾಣಾ ವ್ಯಾಪ್ತಿಗೂ ಬರುತ್ತದೆ. ಇಲ್ಲಿನ ೬ ಸಿಬ್ಬಂದಿಗಳ ಜೊತೆ ಡಿವೈಸ್ಪಿ ಕಚೇರಿಯಲ್ಲಿನ ಸಿಬ್ಬಂದಿ ರೇವಣ್ಣಸ್ವಾಮಿ ಹೋಗಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸುತ್ತಿದೆ.  .           .---------------------------------

ಐಜಿ ವಿಪುಲ್ ಕುಮಾರ್ ಅವರಿಗೊಂದು ಪ್ರಶ್ನೆ....? 
ಪುಣಜನೂರು ಚೆಕ್ ಪೊಸ್ಟ್ ಗೆ ಪೂರ್ವ ಗ್ರಾಮಾಂತರ ಠಾಣಾ ಸಿಬ್ಬಂದಿಗಳು ತಪಾಸಣೆಗೆ ನಿಯೋಜನೆಯಾಗುವುದು ಸಾಮಾನ್ಯ ಆದರೆ ಕಳೆದೆರಡು ವರ್ಷಗಳಿಂದ SDPO ಕಚೇರಿಯಿಂದ ನಿಯೋಜನೆ ಮಾಡುವ ಪ್ರಕ್ರಿಯೆ ನಡೆದಿದೆ.‌ಇದು ನ್ಯಾಯ ಸಮ್ಮತವೇ ಎಂಬುದು ನೋಡಿಮ ಕಾರಣ ಅದರ ಹಿಂದೆ ಈ ವ್ಯವಸ್ಥೆ ಇಲ್ಲಿ ಇರಲಿಲ್ಲ ಎಂಬುದು ನಿಮ್ಮ ಇಲಾಖೆಯವರಿಗೆ ಗೊತ್ತಿರುವ ವಿಚಾರವೆ ಸರಿ. ? ಒಂದು ಉತ್ತಮ ಉದಾಹರಣೆ ಎಂದರೆ ಕಳೆದ ಎರಡು ತಿಂಗಳ ಹಿಂದೆ ಹೆಸರಲ್ಲಿ ವಿಜಯ್ ಕುಮಾರ್ ಎಂಬ ಹೆಸರಿದೆ ಆದರೆ  ಅಲ್ಲಿಗೆ ಹೋಗದೇ  ನಿಯೋಜನೆಯಾಗದಿದ್ದರೂ ವಿಜಯ್ ಕುಮಾರ್ ಅವರ ಹೆಸರಿನಲ್ಲಿ ಮಹದೇವಸ್ವಾಮಿ ಎಂಬ ಡಿವೈಸ್ಪಿ ಕಚೇರಿ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದಾರೆ ಇದೀಗ ೨೧ ರಿಂದ ೨೮ ರ ಮಾರ್ಚ್ ವರೆಗೂ  ರೇವಣ್ಣಸ್ವಾಮಿ ಅವರು ಅದಿಕೃತವಾಗಿ ಕೆಲಸ ಮಾಡುತ್ತಿರುವುದು ದಾಖಲೆ ಇದೆ ಇದು ಎಷ್ಟು ಸರಿ? ಇವರ ನಿಯೋಜನೆ ಮಾಡಲು ಜಿಲ್ಲಾ ಪೊಲೀಸ್ ವರೀಷ್ಟಾದಿಕಾರಿಗಳ ಅದಿಕೃತ ಆದೇಶ ಇದಿಯೇ ಎಂಬುದನ್ನ ಪರಿಶೀಲಿಸಿದರೆ ಮತ್ತೊಂದು ಸತ್ಯ ಹೊರಬಂದರೂ ಬರಬಹುದು. ದಯಮಾಡಿ ಪರಿಶೀಲನೆ ಮಾಡಿ  ಮತ್ತಷ್ಟು ಕ್ರಮ ಜರುಗಿಸಬೇಕಾಗಿದೆ.

Friday, 20 March 2020

ಚಾಮರಾಜನಗರ ಜಿಲ್ಲೆಯಲ್ಲಿ ಯಾವುದೆ ಕೊರೊನೊ ಪ್ರಕರಣ ಇಲ್ಲ : ಜಿಲ್ಲಾದಿಕಾರಿ ರವಿ 20-03-2020

 ಚಾಮರಾಜನಗರ ಜಿಲ್ಲೆಯಲ್ಲಿ ಯಾವುದೆ ಕೊರೊನೊ ಪ್ರಕರಣ ಇಲ್ಲ : ಜಿಲ್ಲಾದಿಕಾರಿ ರವಿ
------------------


ಮೂವರ ಪರೀಕ್ಷಾ ವರದಿ ನೆಗೆಟಿವ್  

ಚಾಮರಾಜನಗರ, ಮಾರ್ಚ್. 20 - ಜಿಲ್ಲೆಯಲ್ಲಿ ವಿದೇಶದಿಂದ ಆಗಮಿಸಿದವರ ಪೈಕಿ ಮೂವರು ವ್ಯಕ್ತಿಗಳ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿದ್ದು, ಈ ಸಂಬಂಧ ಪ್ರಾವಿಷನಲ್ ವರದಿ ಬಂದಿದ್ದು, ಮೂವರ ಪರೀಕ್ಷಾ ವರದಿಯಲ್ಲೂ ನೆಗೆಟಿವ್ ಬಂದಿದೆ. ಯಾವುದೇ ಸೋಂಕು ಕಂಡುಬಂದಿಲ್ಲ ಎಂದು ವರದಿ ತಿಳಿಸಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯವನ್ನು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಗೆ ವಿದೇಶದಿಂದ ಆಗಮಿಸಿದವರ ಪೈಕಿ ತಪಾಸಣೆ ನಡೆಸಿ ಮೂವರು ವ್ಯಕ್ತಿಗಳ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಮೈಸೂರಿನ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ವರದಿಯು ಬಂದಿದ್ದು, ನೆಗೆಟಿವ್ ಆಗಿದೆ. ಆದರೂ ಸಹ ಈ ಮೂವರನ್ನು ಆಸ್ಪತ್ರೆಯಲ್ಲಿಯೇ ಇರಿಸಿ ಅವರ ಆರೋಗ್ಯದ ಮೇಲೆ ನಿಗಾವಣೆ ಮುಂದುವರೆಸಲಾಗಿದೆ. ಇಂದೂ ಸಹ ವಿದೇಶದಿಂದ 10 ಜನರು ಬಂದಿದ್ದಾರೆ. ಎಲ್ಲರೂ ಆರೋಗ್ಯವಾಗಿದ್ದಾರೆ. ಈ ಎಲ್ಲರನ್ನು ಮನೆಯಲ್ಲಿಯೇ ಪ್ರತ್ಯೇಕಿಸಿ ನಿಗಾ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

ಒಟ್ಟಾರೆ ಇದುವರೆಗೆ 33 ಮಂದಿ ವಿದೇಶದಿಂದ ಬಂದವರಾಗಿದ್ದಾರೆ. 26 ಮಂದಿಯನ್ನು ಮನೆಯಲ್ಲಿಯೇ ಪ್ರತ್ಯೇಕಿಸಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ನಾಲ್ವರು 14 ದಿನಗಳ ಹೋಮ್ ಕ್ವಾರೆಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದ್ದಾರೆ.






*ಮುಂದಿನ ಆದೇಶ ತನಕ ಅಂತರರಾಜ್ಯ ಬಸ್ ಸಂಚಾರ ಸ್ಥಗಿತ, ಗುಂಡ್ಲುಪೇಟೆ, ತೆರಕಣಾಂಬಿ ಸಂತೆ ರದ್ದು, ದಾ.ದತ್ತಿ ದೇವಾಲಯಗಳಿಗೆ ಭಕ್ತರ ಪ್ರವೇಶ ನಿಷೇದ,ಸಂಬಂದಿಸಿ ಆದೇಶ ಪತ್ರಗಳು ಇಲ್ಲಿದೆ







ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು