Thursday, 16 July 2020

ಹೆಬ್ಬೆಟ್ಟು ಪತ್ರಕರ್ತರ ಹಾವಳಿಗೆ ಕಡಿವಾಣ ಇಲ್ಲವೇ?

ಸ್ನೇಹಿತರೊಬ್ಬರ ಅಂಕಣ.
೯೪೮೦೦೩೦೯೮೦ ನಾವು ನಕಲಿಸಿ ಹಾಕಿದ್ದೇವೆ.


ಹೆಬ್ಬೆಟ್ಟು ಪತ್ರಕರ್ತರ ಹಾವಳಿಗೆ ಕಡಿವಾಣ ಇಲ್ಲವೇ?

ನಕಲಿ ಪತ್ರಕರ್ತರನ್ನು ಪೋಷಿಸುತ್ತಿರುವ ಪತ್ರಕರ್ತರ ಸಂಘಗಳು, ಭ್ರಷ್ಟ ಅಧಿಕಾರಿಗಳು, ಜನಪ್ರತಿನಿಧಿಗಳು

ಪತ್ರಕರ್ತರು ಎಂದರೆ, ಭ್ರಷ್ಟಾಚಾರವನ್ನು ಎತ್ತಿಹಿಡಿಯುವ ಹೋರಾಟಗಾರರು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಸಮಾಜದ ರಕ್ಷಕರು ಎನ್ನುವುದು ಜನಸಾಮಾನ್ಯರ ತಿಳಿವಳಿಕೆಯಾಗಿತ್ತು. ಆದರೆ, ಪತ್ರಕರ್ತರ ಶ್ರೇಷ್ಠತೆಯನ್ನು ಇನ್ನುಮುಂದೆ ಚಲನಚಿತ್ರಗಳಲ್ಲಿ ಮಾತ್ರ ಕಾಣಲು ಸಾಧ್ಯ. ನಿಜ ಜೀವನದಲ್ಲಿ ಅಸಾಧ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಜನಪರವಾಗಿ ಮತ್ತು ಸಮಾಜದ ಅಭಿವೃದ್ಧಿಗೆ ಇವರು ಕೆಲಸ ಮಾಡುವುದಾದರೆ ಇವರನ್ನು ಸ್ವಾಗತಿಸಬಹುದು. ಆದರೆ, ಬಹುತೇಕ ಪತ್ರಕರ್ತರು ಹೆಬ್ಬೆಟ್ಟು ಪತ್ರಕರ್ತರು, ಮೊಬೈಲ್ ಪತ್ರಕರ್ತರು ಆಗಿದ್ದಾರೆ. ಒಂದು ವಾಸ್ತವ ಸುದ್ದಿಯನ್ನು ತಮ್ಮ ಲೇಖನಿ ಮೂಲಕ ಪತ್ರಿಕೆಗೆ ಬರೆಯಲು ಬರವಣೀಗೆಯೇ ಗೊತ್ತಿಲ್ಲದ ರೋಲ್‌ಕಾಲ್ ಪತ್ರಕರ್ತರ ಹಾವಳಿ ಸಮಾಜದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಅಲ್ಲದೇ ಮೊಬೈಲ್ ಹಿಡಿದು ದೃಶ್ಯಗಳನ್ನು ಸೆರೆ ಹಿಡಿದು ಅದನ್ನು ಯಥಾವತ್ತಾಗಿ ಯು ಟ್ಯೂಬ್ ಚಾನಲ್‌ಗಳಲ್ಲಿ ಪ್ರಸಾರ ಮಾಡಿ ಅದನ್ನು ಸುದ್ದಿ ಮಾಡಿದ ವ್ಯಕ್ತಿಗಳ ಮೊಬೈಲ್‌ಗಳಿಗೆ ಕಳಿಸಿ ಹಣಕ್ಕೆ ಬೇಡಿಕೆ ಇಡುವವರ ಸಂಖ್ಯೆಯೂ ಕಡಿಮೆ ಏನಲ್ಲ.
ಪತ್ರಿಕೋದ್ಯಮದ ಗಂಧ ಗಾಳಿ, ಸಭ್ಯತೆ, ನೀತಿ, ನಿಯಮ ಯಾವುದೂ ಗೊತ್ತಿಲ್ಲದ ಅಥವಾ ಕನಿಷ್ಠ ವಿದ್ಯಾರ್ಹತೆಯೂ ಇಲ್ಲದ ಕೆಲವು ವ್ಯಕ್ತಿಗಳು, ಯುವಕರು ಸುಲಭವಾಗಿ ಹಣ ಮಾಡಲು, ಅಧಿಕಾರಿಗಳನ್ನು ಬೆದರಿಸಿ ತಮ್ಮ ಕೆಲಸ ಮಾಡಿಸಿಕೊಳ್ಳಲು ರಾಜಕಾರಣಿಗಳ ಬಳಿ ಎಂಜಲು ಕಾಸಿಗೆ ಕಾಯುತ್ತ ಪತ್ರಕರ್ತನ ವೇಷ ಧರಿಸಿರುವುದು ಎಲ್ಲೆಡೆ ಕಂಡುಬರುತ್ತಿದೆ.
ಯಾರು ಇವರನ್ನು ಪೋಷಿಸುತ್ತಿರುವುದು ಎಂಬ ಹುಡುಕಾಟ ನಡೆಸಿದರೆ ನಮಗೆ ಆಶ್ವರ್ಯವೇ ಕಾದಿರುತ್ತದೆ. ಬಹುತೇಕ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರೇ ಇಂತಹ ನಕಲಿ ಪತ್ರಕರ್ತರನ್ನು ಪೋಷಿಸುತ್ತಿದ್ದಾರೆ. ಒಂದು ತಾಲ್ಲೂಕಿನಲ್ಲಿ ಬರವಣಿಗೆ ಗೊತ್ತಿರುವ, ಪತ್ರಿಕೋದ್ಯಮ ಕಲಿತ ವಿದ್ಯಾವಂತರು ಮತ್ತು ಸಮಾಜಮುಖಿಯಾಗಿ ಕೆಲಸ ಮಾಡುವ ಮೂರ್‍ನಾಲ್ಕು ಪತ್ರಕರ್ತರನ್ನು ಮಾತ್ರ ನಾವು ಕಾಣಬಹುದು. ಒಟ್ಟಾರೆ ಒಂದು ತಾಲ್ಲೂಕಿನಲ್ಲಿ ೧೦ ರಿಂದ ೧೫ ಜನ ಪತ್ರಕರ್ತರು ಇದ್ದರೆ, ಪತ್ರಕರ್ತರ ಸಂಘಗಳು ಕನಿಷ್ಠ ೪ ಇರುತ್ತವೆ. 
ಇದಕ್ಕೆ ಪತ್ರಕರ್ತರಲ್ಲಿನ ಬದ್ಧತೆಯ ಕೊರತೆ, ಸ್ವಾರ್ಥ, ದ್ವೇಷ, ಗುಂಪುಗಾರಿಕೆ ಮತ್ತು ರಾಜಕಾರಣಿಗಳ ಸಖ್ಯ ಪ್ರಮುಖ ಕಾರಣ ಎನ್ನಬಹುದು. ಕೆಲವು ವರ್ಷಗಳಿ ಹಿಂದೆ ಇಡೀ ರಾಜ್ಯದಲ್ಲಿ ಪತ್ರಕರ್ತರನ್ನು ಪ್ರತಿನಿಧಿಸುವ ಒಂದು ಸಂಘ ಮಾತ್ರ ಇತ್ತು. ಈ ಸಂಘಕ್ಕೆ ಸೇರಲು ಒಂದಷ್ಟು ನಿಯಮಾವಳಿ ರೂಪಿಸಲಾಗಿತ್ತು. ಆದರೆ, ಇಂತಹ ಸಂಘದಲ್ಲಿ ಅರ್ಹತೆ ಇರುವ ಪತ್ರಕರ್ತರಿಗೆ ಸದಸ್ಯತ್ವ ಕೊಡಲು ನಿರಾಕರಣೆ ಮಾಡಿದ ಕಾರಣ ಮತ್ತೊಂದು ಸಂಘ, ಮಗದೊಂದು ಸಂಘಗಳ ಹುಟ್ಟಿಗೆ ಕಾರಣವಾಯಿತು. ಇಂತಹ ಎಮರ್ಜೆನ್ಸಿ ಸಂಘಗಳಲ್ಲಿ ಸದಸ್ಯತ್ವ ಪಡೆಯಲು ಸದಸ್ಯರ ಸಂಖ್ಯೆ ಹೆಚ್ಚಿಸುವ ಕಾರಣದಿಂದ ಸದಸ್ಯತ್ವ ಪಡೆಯಲು ಬೇಕಿದ್ದ ಕಠಿಣ ನಿಯಮಗಳನ್ನು ಸಡಿಲಗೊಳಿಸಲಾಯಿತು.
ನಂತರ ಇಂತಹ ಸಂಘಗಳಲ್ಲೂ ಒಡಕು ಮೂಡಿದ ಕಾರಣ ಪತ್ರಕರ್ತರ ಸಂಘಗಳು ನಾಯಿ ಕೊಡೆಗಳಂತೆ ಹೆಚ್ಚಿ ಹಾದಿ ಬೀದಿಯಲ್ಲಿ ತಿರುಗಾಡುವ ಪುಂಡರು, ಪೋಕರಿಗಳು ಪತ್ರಕರ್ತರ ವೇಷ ಧರಿಸಲು ಸ್ವಾರ್ಥ ಪತ್ರಕರ್ತರೇ ಕಾರಣ ಎನ್ನುವುದು ಕಹಿ ಸತ್ಯ.
ನೂರಾರು ಯು ಟ್ಯೂಬ್ ಚಾನಲ್‌ಗಳು, ಕೇವಲ ಎರಡು ಪುಟದ ೩೦ ಪತ್ರಿಕೆಗಳನ್ನು ಪ್ರಿಂಟ್ ಮಾಡಿ ಸರ್ಕಾರಿ ಕಚೇರಿಗಳಿಗೆ ತಲುಪಿಸುವ ಹತ್ತಾರು ಹೆಬ್ಬೆಟ್ ಸಂಪಾದಕರು, ಇಂತಹ ಲೋಕಲ್ ಪತ್ರಿಕೆಯ ಲೋಕಲ್ ವರದಿಗಾರರು. ಹೀಗೆ ಒಂದು ಜಿಲ್ಲಾ ಕೇಂದ್ರದಲ್ಲಿ ೩೦ ಲೋಕಲ್ ಪತ್ರಿಕೆಗಳು ಪ್ರಿಂಟ್ ಆದರೆ, ಒಂದು ತಾಲ್ಲೂಕಿನಲ್ಲಿ ೩೦ ಲೋಕಲ್ ವರದಿಗಾರರು ಮತ್ತು ರಾಜ್ಯಮಟ್ಟದ ಪತ್ರಿಕೆಗಳ ಹತ್ತು ಹದಿನೈದು ವರದಿಗಾರರು, ಯುಟ್ಯೂಬ್ ಚಾನಲ್‌ಗಳ ಕ್ಯೂಟ್ ವರದಿಗಾರ ಹಿಂಡೇ ಇರುತ್ತದೆ. ಇದು ಖಂಡಿತಾ ತಪ್ಪಲ್ಲ. ಆದರೆ, ಒಂದು ಸುದ್ದಿ ಮಾಡಲು ಇಂತಿಷ್ಠು ಹಣ ನೀಡಬೇಕು ಎನ್ನುವ ಅಲಿಖಿತ ನಿಯಮ ರಾಜಕಾರಣಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ.
ಕಂಡು ಕೇಳರಿಯದ ಪತ್ರಿಕೆಗಳ ಐಡಿ ಕಾರ್ಡ್, ವಿಸಿಟಿಂಗ್ ಕಾರ್ಡ್‌ಗಳನ್ನು ಇಟ್ಟುಕೊಂಡು, ದಪ್ಪ ದಪ್ಪ ಅಕ್ಷರಗಳಲ್ಲಿ ತಮ್ಮ ಕಾರು, ಬೈಕ್‌ಗಳ ಮುಂಭಾಗ ಪ್ರೆಸ್ ಎಂದು ಬರೆಸಿಕೊಂಡು ಸರ್ಕಾರಿ ಕಚೇರಿಗಳಲ್ಲಿ ದಾಳಿ ಇಡುವುದು, ಅಧಿಕಾರಿಗಳನ್ನು ಬೆದರಿಸಿ ಹಣ ಪೀಕುವುದು ಸರ್ವೆ ಸಾಮಾನ್ಯವಾಗಿದೆ. ಕೆಲವು ಉತ್ತಮ, ಪ್ರಾಮಾಣಿಕ ಅಧಿಕಾರಿಗಳಿಗೆ ಸ್ಥಳೀಯ ಪತ್ರಕರ್ತರು ನುಂಗಲಾರದ ತುತ್ತಾದರೆ, ಭ್ರಷ್ಟ ಅಧಿಕಾರಿಗಳಿಗೆ ಇಂತಹ ನಕಲಿ ಪತ್ರಕರ್ತರು ರಕ್ಷಕರಾಗಿದ್ದಾರೆ. 

ಯಾವುದೇ ಸಂಘ ಸಂಸ್ಥೆಯವರು, ಸಣ್ಣಪುಟ್ಟ ಒಂದು ಕಾರ್ಯಕ್ರಮಕ್ಕೆ ೧೦ ಸಾವಿರ ರೂ. ಖರ್ಚು ಮಾಡಿದರೆ, ಈ ಕಾರ್ಯಕ್ರಮಕ್ಕೆ ಅಹ್ವಾನವಿಲ್ಲದೆ ಬರುವ ಪತ್ರಕರ್ತರಿಗೆ ೨೦ ಸಾವಿರ ರೂ. ಎತ್ತಿಡಬೇಕು. ಕಾರ್ಯಕ್ರಮದ ಆಯೋಜಕರು ಬೇಕಂತಲೇ ಇಂತಹವರಿಗೆ ಆಹ್ವಾನ ನೀಡುವುದಿಲ್ಲ. ಆದರೆ, ಕಳ್ಳ ಬೆಕ್ಕು ಎಲ್ಲಿ ಹಾಲಿದೆ ಎನ್ನುವುದು ಪತ್ತೆ ಮಾಡುವ ಹಾಗೆ ನಕಲಿ ಪತ್ರಕರ್ತರು ಯಾವ ಕಡೆ ಕಾರ್ಯಕ್ರಮ ನಡೆಯುತ್ತಿದೆ ಎನ್ನುವುದನ್ನು ಕ್ಷಣ ಮಾತ್ರದಲ್ಲಿ ಪತ್ತೆ ಮಾಡುತ್ತಾರೆ. ತಮಗೆ ಆಹ್ವಾನವಿಲ್ಲದಿದ್ದರೂ ಕಾರ್ಯಕ್ರಮದ ಆಯೋಜಕರು ಕಂಡರೆ ಮುಗುಳ್ನಕ್ಕು ಕೂರುತ್ತಾರೆ. ಕಾರ್ಯಕ್ರಮ ಮುಗಿದ ಬಳಿಕ ಎಲ್ಲರೂ ಎದ್ದು ಹೋದರೂ ಈ ನಕಲಿ ಪತ್ರಕರ್ತರು ಮಾತ್ರ ಜಗ್ಗುವುದಿಲ್ಲ. ಏನಾದರೂ ವಸೂಲಿ ಮಾಡಿಕೊಂಡೇ ಹೋಗುತ್ತಾರೆ. ಈ ವೇಳೆ ಆಯೋಜಕರು ಏನೋ ಪಾಪ ಬಂದಿದ್ದಾರೆ ಎಂದು ಒಂದಿಬ್ಬರಿಗೆ ಹಣ ಕೊಡಲು ಮುಂದಾದರೂ ನಕಲಿ ಪತ್ರಕರ್ತರು ಕಾಗೆಗಳ ಹಾಗೆ ಮುತ್ತಿಕೊಂಡು ತಮಗೂ ಕೊಡಿ ಎಂದು ಬಾಯಿ ಬಿಟ್ಟೆ ಕೇಳುವುದು ನಡೆಯುತ್ತದೆ. ಒಬ್ಬನಿಗೆ ಕೊಟ್ಟು ಮತ್ತೊಬ್ಬರಿಗೆ ಕೊಡಲಿಲ್ಲ ಎಂದರೆ ಮುನಿಸು, ನೋಡಿ ಏನ್ಮಾಡ್ತೀವಿ ಎನ್ನುವ ಧಮಕಿ, ಕಾರ್ಯಕ್ರಮದ ವಿರುದ್ಧ ಸುದ್ದಿ ಮಾಡುವುದು, ತೆಗಳುವುದು, ನಡೆಯುತ್ತಿದೆ. ಇದು ಪತ್ರಕರ್ತರಿಗೆ ಶೋಭೆ ತರುವುದಿಲ್ಲ ಎನ್ನುವುದು ಗೊತ್ತಿದ್ದರೂ ಸಹ ಸುಖಾ ಸುಮ್ಮನೆ ಒಂದು ಕಾರ್ಯಕ್ರಮಕ್ಕೆ ಹೋಗಿ ಪೆನ್ನು ಹಿಡಿದು ಹಾಳೆಯ ಮೇಲೆ ಗೀಜುವ ನಾಟಕವಾಡಿದರೆ, ಅಥವಾ ಮೊಬೈಲ್ ಹಿಡಿದು ಕಾರ್ಯಕ್ರಮವನ್ನು ಚಿತ್ರೀಕರಿಸುಂತೆ ತೋರ್ಪಡಿಸಿದರೆ ಸಾಕು. ಐನೂರು ಗ್ಯಾರಂಟಿ ಇರುವಾಗ ಯಾವುದೇ ಮಾತು ಮಾರ್ಗಕ್ಕೆ ಜಗ್ಗದ ಭಂಡ ಪತ್ರಕರ್ತರ ಪಡೆಯೇ ಹಣ ಮಾಡುವ ಅಕ್ರಮ ದಂಧೆಗೆ ನಿಂತಿದೆ. 
ಇಂತಹ ಪತ್ರಕರ್ತನ ಸೋಗಿನಲ್ಲಿರುವ ಹಲವಾರು ವಿಷಜಂತುಗಳು ಸಮಾಜದ ಅಭಿವೃದ್ಧಿಗೆ ಮಾರಕವಾಗಿದ್ದಾರೆ. ಯವುದೇ ಕಾಮಗಾರಿಯ ಗುದ್ದಲಿ ಪೂಜೆ ಅಥವಾ ಉದ್ಘಾಟನೆಯಾಗಲಿ ಅದರ ಕಾರ್ಯಕ್ಷಮತೆ, ಗುಣಮಟ್ಟ ಪರೀಕ್ಷಿಸಲು ಯಾವುದೇ ಪತ್ರಕರ್ತರು ಮುಂದಾಗುವುದಿಲ್ಲ. ಅಥವಾ ತನಿಖಾ ವರದಿ ಮಾಡುವುದಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಅಥವಾ ಗುತ್ತಿಗೆದಾರರು ಕೊಡುವ ಭಕ್ಷೀಸಿಗೆ ಕೈ ಒಡ್ಡಿ ಅಕ್ರಮ ಅಥವಾ ಕಳಪೆ ಕಾಮಗಾರಿಗಳನ್ನು ಕಂಡೂ ಕಾಣದಂತೆ ಹೊರಟುಹೋಗುತ್ತಾರೆ.
ಕೆಲವು ರಾಜಕಾರಣಿಗಳು ತಮ್ಮ ರಕ್ಷಣೆಗೆ ಪತ್ರಕರ್ತರನ್ನು ಸಾಕುತ್ತಿದ್ದಾರೆ. ಯಾರಾದರು ಇವರ ವಿರುದ್ಧ ದನಿ ಎತ್ತಿದರೆ ಅಂತಹವರ ದನಿಯನ್ನು ಬೇರೆ ರೀತಿಯಲ್ಲಿ ಅಡಗಿಸಲಾಗುತ್ತದೆ.
ಜತೆಗೆ ಕೆಲವು ಭ್ರಷ್ಟ ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳ ಕೃಪಾಪೋಷಣೆಯಲ್ಲಿ ನಡೆಯುವ ಇಂತಹ ಯು ಟ್ಯೂಬ್ ಚಾನಲ್‌ಗಳು, ಓನ್ಲಿ ಥರ್ಟಿ ಪ್ರಿಂಟ್ ಆಗುವ ಡರ್ಟಿ ಪೇಪರ್‌ಗಳಿಗೆ ಕಡಿವಾಣ ಹಾಕುವುದು ಹೇಗೆ ಎನ್ನುವುದನ್ನು ವಿಚಾರ ಮಾಡಬೇಕಿದೆ.
ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೋಲಿಸ್ ವರಿಷ್ಟಾಧಿಕಾರಿಗಳು ಇಂತಹ ನಕಲಿ ಪತ್ರಕರ್ತರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ವೃತ್ತಿನಿರತ ಪತ್ರಕರ್ತರ ಆತ್ಮಗೌರವವನ್ನು ಹೆಚ್ಚಿಸಬೇಕಿದೆ. 


ಬರಹ:
ದಾವಲಸಾಬ ತಾಳಿಕೋಟಿ
ಪತ್ರಕರ್ತರು 
ಗಜೇಂದ್ರಗಡ ಜಿಲ್ಲಾ ಗದಗ

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು