ಮಲೆಮಹದೇಶ್ವರ ಕ್ಷೇತ್ರಕ್ಕೆ ಮುಖ್ಯಮಂತ್ರಿಯವರ ಭೇಟಿ
ಚಾಮರಾಜನಗರ, ನ.25( ರಾಮಸಮುದ್ರ ಎಸ್.ವೀರಭದ್ರಸ್ವಾಮಿ)- ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಮುಖ್ಯಮಂತ್ರಿಯವರಾದ ಬಿ. ಎಸ್ .ಯಡಿಯೂರಪ್ಪರವರು ಇಂದು ಭೇಟಿ ನೀಡಿ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದರು.
ಹೆಲಿಕ್ಯಾಪ್ಟರ್ ಮೂಲಕ ಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿಯವರನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್, ಶಾಸಕರಾದ ಆರ್ ನರೇಂದ್ರ, ಸಿ. ಎಸ್. ನಿರಂಜನ್ ಕುಮಾರ್, ಎನ್ ಮಹೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ. ಬಿ. ಕಾವೇರಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣ್‍ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ಮತ್ತಿತರ ಗಣ್ಯರು ಬರಮಾಡಿಕೊಂಡರು.
ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಮುಖ್ಯಮಂತ್ರಿಯವರು ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಸಾಲೂರು ಮಠಕ್ಕೆ ತೆರಳಿ ಹಿರಿಯ ಸ್ವಾಮೀಜಿಗಳ ಆರೋಗ್ಯ ವಿಚಾರಿಸಿದರು. ಶ್ರೀ ಮಠದ ವತಿಯಿಂದ 2021ನೇ ಸಾಲಿನ ದಿನದರ್ಶೀಕೆಯನ್ನು ಬಿಡುಗಡೆ ಮಾಡಿದರು.
ತದನಂತರ ನಾಗಮಲೆ ಭವನದ ಸಭಾಂಗಣದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದರು. ನಂತರ ಜಿಲ್ಲಾ ರೈತ ಮುಖಂಡರು, ಪ್ರತಿನಿಧಿಗಳು ಹಾಗೂ ಕಬ್ಬು ಬೆಳೆಗಾರರ ಜೊತೆ ಸಮಾಲೋಚಿಸಿ ಅವರ ಅಹವಾಲುಗಳನ್ನು ಆಲಿಸಿದರು. ಇದೇ ವೇಳೆ ರೈತ ಮುಖಂಡರು ಸಲ್ಲಿಸಿದ ಬೇಡಿಕೆ ಹಾಗೂ ಮನವಿ ಪತ್ರವನ್ನು ಮುಖ್ಯಮಂತ್ರಿಗಳು ಸ್ವೀಕರಿಸಿದರು.
------------------
ಮಲೆಮಹದೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ : ಮುಖ್ಯಮಂತ್ರಿಯವರಾದ ಬಿ. ಎಸ್. ಯಡಿಯೂರಪ್ಪ
ಚಾಮರಾಜನಗರ, ನ .25(ವಿಎಸ್ಎಸ್)- ಜಿಲ್ಲೆಯ ಮಲೆಮಹದೇಶ್ವರ ಶ್ರೀ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿಯವರಾದ ಬಿ. ಎಸ್. ಯಡಿಯೂರಪ್ಪರವರು ತಿಳಿಸಿದರು.
ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದ ಸಭಾಂಗಣದಲ್ಲಿಂದು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಮುಖ್ಯಮಂತ್ರಿಯವರು ಪ್ರಾಧಿಕಾರದ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ ಇಂದು ಪ್ರಾಧಿಕಾರದ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಲಾಗಿದೆ. ಮಲೆ ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಧಿಕಾರದ ವತಿಯಿಂದ 15 ಶಾಲೆಗಳನ್ನು ಗುರುತಿಸಲಾಗಿದೆ. ಈ ಶಾಲೆಗಳನ್ನು ದತ್ತು ತೆಗೆದುಕೊಂಡು ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿ ಶಾಲೆಗಳ ಸರ್ವಾಂಗೀಣ ಪ್ರಗತಿಗೆ ಒತ್ತು ನೀಡಲಾಗುವುದು ಎಂದರು.
ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಮಾಡಿಕೊಡಲಾಗುವುದು. ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದೇನೆ. ಇದರಲ್ಲಿ ಈಗಾಗಲೇ ಪೂರ್ಣಗೊಂಡಿರುವ ಹಲವು ಕಾಮಗಾರಿಗಳು ಇವೆ. ಇನ್ನು ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಪ್ರಾಧಿಕಾರದ ಸಭೆಯಲ್ಲಿ ಉಪಮುಖ್ಯಮಂತ್ರಿಯವರಾದ ಗೋವಿಂದ ಕಾರಜೋಳ, ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಸುರೇಶ್ ಕುಮಾರ್, ಸಾಲೂರು ಮಠದ ಶ್ರೀಗಳಾದ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳು, ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಶಾಸಕರಾದ ಆರ್ ನರೇಂದ್ರ, ಎನ್ ಮಹೇಶ್, ಸಿ ಪುಟ್ಟರಂಗಶೆಟ್ಟಿ, ಸಿ .ಎಸ್. ನಿರಂಜನ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಕೆ ಟಿ ಶ್ರೀಕಂಠೇಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ. ಬಿ. ಕಾವೇರಿ, ಜಿಲ್ಲಾಧಿಕಾರಿ ಡಾ ಎಂ ಆರ್ ರವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಸೇರಿದಂತೆ ಇತರರು ಹಾಜರಿದ್ದರು.
No comments:
Post a Comment