ಗಣರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ
ಚಾಮರಾಜನಗರ, ಜ. 04 :- ಜಿಲ್ಲಾಡಳಿತ ಹಾಗೂ ಎಲ್ಲಾ ಸಂಘಸಂಸ್ಥೆಗಳ ಸಹಕಾರದೊಂದಿಗೆ ಜನವರಿ 26ರಂದು ಗಣರಾಜ್ಯೋತ್ಸವ ದಿನ ಆಚರಣೆಯನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮವನ್ನು ಸುಸೂತ್ರವಾಗಿ ಕೈಗೊಳ್ಳಲು ನಿರ್ಧಾರ ಮಾಡಲಾಯಿತು.
ಸಭೆಯಲ್ಲಿ ಹಾಜರಿದ್ದ ಸಂಘಟನೆಗಳ ಮುಖಂಡರು ಮಾತನಾಡಿ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಹೆಚ್ಚು ಆದ್ಯತೆ ಕೊಡಬೇಕು. ಖಾಸಗಿ ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಗಣರಾಜ್ಯೋತ್ಸವ ದಿನ ಆಚರಿಸಬೇಕು. ಬ್ಯಾಂಕುಗಳಲ್ಲಿ ಸಹ ಆಚರಣೆಗೆ ಸೂಚನೆ ನೀಡಬೇಕು. ಯಾವುದೇ ಲೋಪವಿಲ್ಲದೇ ಕಾರ್ಯಕ್ರಮ ಆಯೋಜನೆಯಾಗಬೇಕು. ಕಾರ್ಯಕ್ರಮಕ್ಕೆ ನಾವು ಎಲ್ಲ ಸಹಕಾರ ನೀಡಲಿದ್ದೇವೆ ಎಂದರು.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಮಾತನಾಡಿ ಎಲ್ಲ ಶಾಲೆಗಳು ಕಡ್ಡಾಯವಾಗಿ ಗಣರಾಜ್ಯೋತ್ಸವ ಆಚರಿಸಲು ಸೂಚಿಸಲಾಗುತ್ತದೆ. ಜಿಲ್ಲೆಯಲ್ಲಿರುವ ಬ್ಯಾಂಕುಗಳು ಕೂಡ ಗಣರಾಜ್ಯೋತ್ಸವ ಆಚರಿಸುವಂತೆ ನಿರ್ದೇಶನ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಕಾರ್ಯಕ್ರಮ ಆಚರಿಸದೇ ಇರುವವರ ಬಗ್ಗೆ ಗಮನಿಸಲಾಗುತ್ತದೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಎಂದಿನಂತೆ ಗಣರಾಜ್ಯೋತ್ಸವ ದಿನ ಆಚರಣೆ ಮಾಡಲಾಗುತ್ತದೆ. ಬೆಳಗಿನ ಪಥ ಸಂಚಲನ, ಸಾಂಸ್ಕøತಿಕ ಕಾರ್ಯಕ್ರಮಗಳು, ಧ್ವಜಾರೋಹಣ ಇತರೆ ಸಿದ್ದತೆಗಳಿಗೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಆಕರ್ಷಕ ಪಥಸಂಚಲನ ಕಾರ್ಯಕ್ರಮಕ್ಕೆ ಮೊರಾರ್ಜಿ, ಕಿತ್ತೂರು ರಾಣಿ ಚನ್ನಮ್ಮ ಸೇರಿದಂತೆ ಎಲ್ಲಾ ಸರ್ಕಾರಿ ವಸತಿ ಶಾಲೆಗಳ ಮಕ್ಕಳನ್ನು ಸಹ ತೊಡಗಿಸಿಕೊಳ್ಳಬೇಕು. ಬೆಳಗಿನ ಸಾಂಸ್ಕøತಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಮೂಡಿಬರಲು ಎಲ್ಲರಿಗೂ ಸರಿಸಮಾನವಾಗಿ ತರಬೇತಿ, ತಾಲೀಮು ನೀಡುವ ಕೆಲಸ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಸಂಜೆಯ ವೇಳೆ ಚಾಮರಾಜೇಶ್ವರ ದೇವಾಲಯ ಬಳಿ ಸಹ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲು ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ಈಗಿನಿಂದಲೇ ಕಾರ್ಯಕ್ರಮಕ್ಕೆ ಪೂರ್ವಭಾವಿ ಸಿದ್ದತೆಗಳನ್ನು ಕೈಗೊಳ್ಳಬೇಕು ಎಂದರು.
ಕಾರ್ಯಕ್ರಮ ನಿರ್ವಹಣೆಗೆ ಸ್ವಾಗತ ಸಮಿತಿ, ವೇದಿಕೆ ಸಮಿತಿ, ಧ್ವಜಾ ಸಿದ್ದತೆ ಸಮಿತಿ, ಲಘು ಉಪಹಾರ, ಬಹುಮಾನ, ಸಾಂಸ್ಕøತಿಕ ಕಾರ್ಯಕ್ರಮ ಸಮಿತಿಗಳು ಮಾಡಬೇಕಿರುವ ಕೆಲಸಗಳನ್ನು ನಿರ್ದಿಷ್ಟ ಪಡಿಸಲಾಗಿದೆ. ಯಾವುದೇ ಚ್ಯುತಿ ಬಾರದಂತೆ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಅಧಿಕಾರಿಗಳು ಮುಂದಾಗುವಂತೆ ಜಿಲ್ಲಾಧಿಕಾರಿ ಕಾವೇರಿಯವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಎಚ್. ಚೆನ್ನಪ್ಪ, ತಹಶೀಲ್ದಾರ್ ಕೆ. ಪುರಂದರ್, ಸಂಘಟನೆಗಳ ಮುಖಂಡರಾದ ಚಾ.ರಂ. ಶ್ರೀನಿವಾಸಗೌಡ, ಗು. ಪುರುಷೋತ್ತಮ್, ಚಾ.ಗು. ನಾಗರಾಜು, ಜಿ. ಬಂಗಾರು, ಚಾ.ಹ. ಶಿವರಾಜು, ಪಣ್ಯದಹುಂಡಿ ರಾಜು, ಬಸವನಪುರ ರಾಜಶೇಖರ್, ಉಮ್ಮತ್ತೂರು ಬಸವರಾಜು ಇತರೆ ಸಂಘಟನೆ ಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಅಗತ್ಯ ಸಹಕಾರ: ವೀಕ್ಷಕರಾದ ನವೀನ್‍ರಾಜ್ ಸಿಂಗ್
ಚಾಮರಾಜನಗರ, ಜ. 04 ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗಿದ್ದು, ಈ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಹಕಾರ, ಸಲಹೆ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಮಿನರಲ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲಾ ಮತದಾರರ ಪಟ್ಟಿಯ ವೀಕ್ಷಕರಾದ ನವೀನ್‍ರಾಜ್ ಸಿಂಗ್ ಅವರು ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ನಡೆದಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ತಮ್ಮ ಸಲಹೆ, ಅಭಿಪ್ರಾಯಗಳನ್ನು ಸಹ ನೀಡಬೇಕಿದೆ ಎಂದು ನವೀನ್‍ರಾಜ್ ಸಿಂಗ್ ಅವರು ಪ್ರಸ್ತಾಪ ಮಾಡಿದರು.
ಈ ವೇಳೆ ಮಾತನಾಡಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳು ನೇಮಕ ಮಾಡಿರುವ ಮತಗಟ್ಟೆ ಮಟ್ಟದ ಏಜೆಂಟರು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ಮುಂದೆ ಸಭೆ ಏರ್ಪಾಡು ಮಾಡಬೇಕು. ಕೆಲ ವಾರ್ಡುಗಳಲ್ಲಿ ಕಳೆದ ನಗರಸಭೆ ಚುನಾವಣೆ ವೇಳೆ ಕೆಲ ಮತದಾರರ ಹೆಸರು ಕೈಬಿಟ್ಟು ಹೋಗಿತ್ತು. ಇದನ್ನು ಸರಿಪಡಿಸಬೇಕು. ಎಂಬಿತ್ಯಾದಿ ವಿಷಯಗಳನ್ನು ಪ್ರಸ್ತಾಪಿಸಿದರು.
ಇದಕ್ಕೆ ಸ್ಪಂದಿಸಿದ ವೀಕ್ಷಕರು ಶೀಘ್ರದಲ್ಲೇ ಮತಗಟ್ಟೆ ಮಟ್ಟದ ಏಜೆಂಟರು ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳ ಸಭೆ ಕರೆಯಬೇಕು. ಎಲ್ಲ ವಿಷಯಗಳು ಮನದಟ್ಟು ಮಾಡಿಕೊಡಬೇಕು ಎಂದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನೀಡಿರುವ ಸಲಹೆ, ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಸಮರ್ಪಕ ಕಾರ್ಯ ನಿರ್ವಹಣೆಗೆ ಸೂಚನೆ ಕೊಡಲಾಗುತ್ತದೆ ಎಂದು ನವೀನ್‍ರಾಜ್ ಸಿಂಗ್ ಅವರು ತಿಳಿಸಿದರು.
ಇದೇ ವೇಳೆ ಅಧಿಕಾರಿಗಳು ಕೈಗೊಂಡಿರುವ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯದ ಪ್ರಗತಿ ಪರಿಶೀಲಿಸಿದ ನವೀನ್‍ರಾಜ್ ಸಿಂಗ್ ಅವರು ಮತದಾರರ ಪಟ್ಟಿ ಪರಿಷ್ಕರಣೆ ಕೆಲಸವನ್ನು ಗಂಭೀರವಾಗಿ ನಿರ್ವಹಿಸಬೇಕು. ಮರಣ ಹೊಂದಿದವರ ಹೆಸರು, ವಿವರವನ್ನು ಗ್ರಾಮ ಲೆಕ್ಕಾಧಿಕಾರಿಗಳು ತಕ್ಷಣವೇ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇದರಿಂದ ಪಟ್ಟಿಯಲ್ಲಿ ಹೆಸರು ಕೈಬಿಡುವ ಸಂಬಂಧ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಮಾತನಾಡಿ ಮತಗಟ್ಟೆ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳು ನೇಮಿಸಿರುವ ಮತಗಟ್ಟೆ ಮಟ್ಟದ ಏಜೆಂಟರ್ ಸಭೆ ನಡೆಸಲು ಅಗತ್ಯ ಕ್ರಮ ವಹಿಸಲಾಗುತ್ತದೆ. ಸಮರ್ಪಕ ಮತದಾರರ ಪಟ್ಟಿ ಪರಿಷ್ಕರಣೆ ಕೆಲಸಕ್ಕೆ ಆದ್ಯ ಗಮನ ನೀಡಲಾಗುತ್ತದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್, ತಹಶೀಲ್ದಾರರಾದ ರಾಯಪ್ಪ ಹುಣಸಗಿ, ಕೆ. ಪುರಂದರ್, ಗಣಪತಿ ಶಾಸ್ತ್ರಿ, ಸುದರ್ಶನ್, ಜಿಲ್ಲಾ ಯೋಜನಾ ನಿರ್ದೆಶಕರಾದ ಕೆ. ಸುರೇಶ್ ಇತರೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಜನವರಿ 5ರಂದು ಮುಜರಾಯಿ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಜ. 04 - ಮುಜರಾಯಿ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಖಾತೆಯ ಸಚಿವರಾದ ಪಿ.ಟಿ. ಪರಮೇಶ್ವರನಾಯ್ಕ ಅವರು ಜನವರಿ 5ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಬೆಳಿಗ್ಗೆ 9.30 ಗಂಟೆಗೆ ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇವಾಲಯಕ್ಕೆ ಭೇಟಿ ಕೊಡುವರು. ಸ್ಥಳೀಯ ಶಾಸಕರು, ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸುವರು. ಸಂತ್ರಸ್ತರ ಮನೆಗೆ ಭೇಟಿ ಕೊಡುವರು. ಬಳಿಕ ಮಧ್ಯಾಹ್ನ 2.30 ಗಂಟೆಗೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವರು. ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ಮಧ್ಯಾಹ್ನ 3.30 ಗಂಟೆಗೆ ಮೈಸೂರಿಗೆ ತೆರಳುವರು.
No comments:
Post a Comment