Monday, 19 September 2016

19-09-2016 ಚಾಮರಾಜನಗರಕ್ಕೆ ಸಿದ್ದು ಭೇಟಿ, ವೈದ್ಯಕೀಯ ಕಾಲೇಜು ಉದ್ಘಾಟನೆ, ಬಡಜನರಿಗೆ ಚಿಕಿತ್ಸೆ ಸೌಲಭ್ಯ ಒದಗಿಸಲು ವೈದ್ಯಕೀಯ ಕಾಲೇಜು: ಸಿ.ಎಂ





 

 ಬಡಜನರಿಗೆ ಚಿಕಿತ್ಸೆ ಸೌಲಭ್ಯ ಒದಗಿಸಲು ವೈದ್ಯಕೀಯ ಕಾಲೇಜು: ಸಿ.ಎಂ 

ಎಸ್.ವೀರಭದ್ರಸ್ವಾಮಿ ರಾಮಸಮುದ್ರ (9480030980)

ಚಾಮರಾಜನಗರ, ಸೆ. 19 - ಗ್ರಾಮೀಣರು, ಬಡಜನರಿಗೆ ವೈದ್ಯಕೀಯ ಚಿಕಿತ್ಸೆ ಸಮರ್ಪಕವಾಗಿ ಒದಗಿಸುವ ಉದ್ದೇಶದೊಂದಿಗೆ ವೈದ್ಯಕೀಯ ಸರ್ಕಾರಿ ಕಾಲೇಜುಗಳನ್ನು ತೆರೆಯಲಾಗುತ್ತಿದೆ ಎಂದು ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ತಿಳಿಸಿದರು.
ಚಾಮರಾಜನಗರ ಹೊರವಲಯದ ಯಡಪುರದಲ್ಲಿಂದು ನೂತನ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವ ಉದ್ದೇಶ ಹೊಂದಿದೆ. ಹೀಗಾಗಿ ಆರಂಭದಲ್ಲೆ 6 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವ ಘೋಷಣೆ ಮಾಡಲಾಗಿತ್ತು. ವೈದ್ಯಕೀಯ ಕಾಲೇಜು ಪ್ರಾರಂಭವಾದರೆ ಅದಕ್ಕೆ ಪೂರಕವಾಗಿ ಆಸ್ಪತ್ರೆ ಸೌಲಭ್ಯವನ್ನು ಸಹ ಒದಗಿಸಬೇಕಾಗುತ್ತದೆ. ಎಲ್ಲಾ ವರ್ಗದ ಜನರಿಗೆ ಆರೋಗ್ಯಸೇವೆ ಹಾಗೂ ಉತ್ತಮ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಲ್ಲಿ ಅವಕಾಶ ಮಾಡಿಕೊಡುವ ಉದ್ದೇಶದಿಂದಲೇ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುತ್ತಿದೆ ಎಂದರು.
ಗ್ರಾಮೀಣ ಜನತೆಗೆ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕೆಂಬ ಕಾರಣದಿಂದ ಆರಂಭಿಸಲಾಗುತ್ತಿರುವ ವೈದ್ಯಕೀಯ ಕಾಲೇಜಿಗೆ 500ರಿಂದ 600 ಹಾಸಿಗೆ ಸಾಮಥ್ರ್ಯವುಳ್ಳ ಆಸ್ಪತ್ರೆಯನ್ನು ಸಹ ನಿರ್ಮಾಣ ಮಾಡಲಾಗುವುದು. ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆ ಬಡಜನರಿಗೆ ತಲುಪಿದರೆ ಸರ್ಕಾರದ ಉದ್ದೇಶ ಸಾರ್ಥಕವಾಗುತ್ತದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.
ವೈದ್ಯವೃತ್ತಿ ಶ್ರೇಷ್ಠವಾದದ್ದು. ಗ್ರಾಮೀಣ ಪ್ರದೇಶದ ಜನರಿಗೆ ವೈದ್ಯರ ಮೇಲೆ ವಿಶೇಷ ಗೌರವ, ಅಭಿಮಾನವಿದೆ. ಆರೋಗ್ಯ ಸೇವೆ ನೀಡುವ ವೈದ್ಯರು ದೇವರೆಂಬ ಭಾವನೆಯನ್ನು ಗ್ರಾಮೀಣ ಜನರು ಹೊಂದಿದ್ದಾರೆ. ಹೀಗಾಗಿ ಸೇವಾ ಮನೋಭಾವನೆಯನ್ನು ವೈದ್ಯರು ಬೆಳೆಸಿಕೊಳ್ಳಬೇಕೆಂದು ಮುಖ್ಯಮಂತ್ರಿಯವರು ಸಲಹೆ ಮಾಡಿದರು.
ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಜನಸಂಖ್ಯೆಗೆ ಅನುಗುಣವಾಗಿ ಅವರ ಕಲ್ಯಾಣಕ್ಕಾಗಿ ಪ್ರಸಕ್ತ ಸಾಲಿನಲ್ಲಿ 19542 ಕೋಟಿ ರೂ. ಗಳನ್ನು ವೆಚ್ಚ ಮಾಡುತ್ತಿದೆ. ಇದು ನಮ್ಮ ಸರ್ಕಾರದ ಬದ್ಧತೆಯಾಗಿದೆ ರೈತರು, ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರಿಗೆ ನ್ಯಾಯ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂರು ಮುಖ್ಯಮಂತ್ರಿಯವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರು ಕಳೆದ ಮೂರುವರೆ ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅವಶ್ಯಕತೆಯಿರುವ ಎಲ್ಲ ಸೌಲಭ್ಯಗಳನ್ನು ಪೂರೈಸಲು ಮುಖ್ಯಮಂತ್ರಿಯವರು ಸ್ಪಂದಿಸಿದ್ದಾರೆ. 238 ಕೋಟೀ ರೂ. ವೆಚ್ಚದಲ್ಲಿ 24 ಕೆರೆಗಳಿಗೆ ಕಬಿನಿ ನದಿಯಿಂದ ನೀರು ತುಂಬಿಸುವ ಮಹತ್ವದ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದೆ ಎಂದರು.
ಜಿಲ್ಲಾಕೇಂದ್ರದ ಅಭಿವೃದ್ಧಿಗೆ 50 ಕೋಟಿ ರೂ. ವಿಶೇಷ ಅನುದಾನ ನೀಡಿದ್ದು, ಇದರಡಿ ಕೈಗೊಳ್ಳಲಿರುವ ವಿವಿಧ ಕಾಮಗಾರಿಗೆ ಶಿಲಾನ್ಯಾಸವನ್ನು ಮುಖ್ಯಮಂತ್ರಿಯವರು ನೆರವೇರಿಸಿದ್ದಾರೆ. ಇದರಿಂದ ಹಲವು ಅಭಿವೃದ್ಧಿ ಕೆಲಸಗಳು ಪೂರ್ಣವಾಗಲಿವೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ವೈದ್ಯಕೀಯ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಅವರು ಮಾತನಾಡಿ ಸಾರ್ವಜನಿಕರ ಹಣದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಕಟ್ಟಲಾಗುತ್ತದೆ. ಹೀಗಾಗಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಕನಿಷ್ಠ 1 ವರ್ಷವಾದರೂ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು. ಗ್ರಾಮಿಣ ಭಾಗದಲ್ಲಿ ಚಿಕಿತ್ಸೆ ನೀಡುವ ಮನೋಭಾವನೆ ರೂಢಿಸಿಕೊಳ್ಳಬೇಕು ಎಂದರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಮಾತನಾಡಿ ಚಾಮರಾಜನಗರ ಜಿಲ್ಲೆಯ ಇತಿಹಾಸ ಪುಟದಲ್ಲಿ ವೈದ್ಯಕೀಯ ಕಾಲೇಜು ಆರಂಭವಾಗುತ್ತಿರುವ ಇಂದಿನ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ಸಂದರ್ಭ ಒದಗಿದೆ. ಜಿಲ್ಲೆಯಲ್ಲಿ 800 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಿಸಲಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕಾಳಜಿ ವಹಿಸಿದೆ ಎಂದರು.
ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿಗಳು, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ವೈದ್ಯಕೀಯ ಕಾಲೇಜು ಆರಂಭಕ್ಕೆ ಶ್ರಮಿಸಿದ ಮುಖ್ಯಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಲೋಕೋಪಯೋಗಿ ಸಚಿವರಾದ ಡಾ. ಎಚ್.ಸಿ.ಮಹದೇವಪ್ಪ, ಪೌರಾಡಳಿತ ರಾಜ್ಯ ಸಚಿವರಾದ ಈಶ್ವರ್ ಬಿ, ಖಂಡ್ರೆ, ವಿಧಾನ ಪರಿಷತ್ ಉಪ ಸಭಾಪತಿಯವರಾದ ಮರಿತಿಬ್ಬೇಗೌಡ,ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಆರ್. ಧರ್ಮಸೇನಾ, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ರಫೀ, ನಗರಸಭೆ ಉಪಾಧ್ಯಕ್ಷರಾದ ಆರ್. ಎಂ. ರಾಜಪ್ಪ, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ. ಚಂದ್ರಕಲಾ, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎಚ್.ವಿ. ಚಂದ್ರು, ತಾಲೂಕು ಪಂಚಾಯತ್ ಸದಸ್ಯರಾದ ಎಸ್. ನಾಗರಾಜಮ್ಮ, ಲೋಕಸಭಾ ಮಾಜಿ ಸದಸ್ಯರಾದ ಎಂ.ಶಿವಣ್ಣ, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎನ್. ಕುಮಾರ್, ಜಿಲ್ಕಲಾ ಉಸ್ತುವಾರಿ ಕಾರ್ಯದರ್ಶಿ ಶಂಭುದಯಾಳ್ ಮೀನಾ, ಜಿಲ್ಲಾಧಿಕಾರಿ ಬಿ, ರಾಮು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿಯವರಿಂದ ವೈದ್ಯಕೀಯ ಕಾಲೇಜು ತರಗತಿ ಆರಂಭ :- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕಾಲೇಜು ಕಟ್ಟಡ ಉದ್ಘಾಟಿಸಿದ ಬಳಿಕ ನೂತನ ಕಾಲೇಜಿನ ಪ್ರಸಕ್ತ ಸಾಲಿನ ತರಗತಿ ವಿದ್ಯಾರ್ಥಿಗಳನ್ನು ಉಪನ್ಯಾಸ ಕೊಠಡಿಯಲ್ಲಿ ಉದ್ದೇಶಿಸಿ ಮಾತನಾಡುವ ಮೂಲಕ ತರಗತಿ ಆರಂಭಿಸಿದ್ದು ವಿಶೇಷವಾಗಿತ್ತು.
ಗ್ರಾಮಿಣ ಭಾಗದ ಸೇವೆಗೆ ವೈದ್ಯಕೀಯ ವಿದ್ಯಾರ್ಥಿಗಳು ಮುಂದಾಗುವಂತೆ ಮುಖ್ಯಮಂತ್ರಿಯವರು ತಿಳಿಸಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಯವರಿಂದ ಚಾಲನೆ

ಚಾಮರಾಜನಗರ, ಸೆ. 19:- ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ನಗರದಲ್ಲಿಂದು ವಿವಿಧ ಅಬಿವೃದ್ದಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.
ಮೊದಲಿಗೆ ಮಹದೇಶ್ವರ ಬಡಾವಣೆಯಲ್ಲಿ ಉಪ್ಪಾರ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಶ್ರೀ ಮಹರ್ಷಿ ವಾಲ್ಮೀಕಿ ಭವನ ಉದ್ಘಾಟಿಸಿದರು. ಬಳಿಕ ಚಾಮರಾಜನಗರ ಅಭಿವೃದ್ಧಿಗಾಗಿ 50 ಕೋಟಿ ರೂ. ವಿಶೇಷ ಅನುದಾನದಡಿ ಕೈಗೊಳ್ಳಲಿರುವ ವಿವಿಧ ಕಾಮಗಾರಿಗೆ ಚಾಮರಾಜೇಶ್ವರ ದೇವಾಲಯ ಉದ್ಯಾನದ ಬಳಿ ಶಿಲಾನ್ಯಾಸ ನೆರವೇರಿಸಿದರು. ನಂತರ ಸಾರಿಗೆ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ಯಡಪುರದಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಟ್ಟಡವನ್ನು ಉದ್ಘಾಟಿಸಿದರು. ಮುಖ್ಯಮಂತ್ರಿಯವರಿಗೆ ಪೌರ ಸನ್ಮಾನ ಮಾಡಲಾಯಿತು.   

  
  

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು