Monday, 16 May 2016

13-05-05 ರಿಂದ 15-05-2016 ಚಾಮರಾಜನಗರ ಸುದ್ದಿಗಳು








ಶಾಲೆ ಕಡೆ ನನ್ನ ನಡೆ ಆಂದೋಲನ ಜನಾಂದೋಲನವಾಗಬೇಕು
ಚಾಮರಾಜನಗರ, ಮೇ. 12 :- ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಶಿಕ್ಷಣ ವಂಚಿತ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಎಲ್ಲರು ಪಾಲ್ಗೊಳ್ಳುವ ಆಂದೋಲನ ಅಭಿಯಾನ  ಕಾರ್ಯಕ್ರಮ ಜನಾಂದೋಲನ ಮಾದರಿಯಲ್ಲಿ ಆಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ. ಕೃಪಾಅಮರ್‍ಆಳ್ವಾ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಕೆ.ಡಿ.ಪಿ. ಸಭಾಂಗಣದಲ್ಲಿ ಶಾಲೆ ಕಡೆ ನನ್ನ ನಡೆ, ಶಿಕ್ಷಣ ನನ್ನ ಮೂಲಭೂತ ಹಕ್ಕು ಆಂದೋಲನ ಅಭಿಯಾನ ಕುರಿತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸಿದೆ. ಯಾವುದೇ ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಲೈಂಗಿಕ ದೌರ್ಜನ್ಯ ಹಾಗೂ ಪೋಷಕರ ಅನಕ್ಷರತೆ ಇನ್ನಿತರೆ ಕಾರಣಗಳಿಂದ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಶಾಲೆ ಕಡೆ ನನ್ನ ನಡೆ, ಶಿಕ್ಷಣ ನನ್ನ ಮೂಲಭೂತ ಹಕ್ಕು ಆಂದೋಲನ ಅಭಿಯಾನ ಕಾರ್ಯಕ್ರಮಕ್ಕೆ ಏಪ್ರಿಲ್ 1ರಂದು ಗೃಹ ಸಚಿವರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಚಾಲನೆ ನೀಡಿದ್ದಾರೆ. ಇದರ ಅಂಗವಾಗಿ ಏಪ್ರಿಲ್ 23ರಿಂದ ಜೂನ್ 10ರವರೆಗೆ ಆಯೋಗದ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯು ಪ್ರವಾಸ ಮಾಡಿ ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯಿಂದ ಈಗಾಗಲೇ ಶಾಲೆಯಿಂದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಿದ್ದರೂ ಸಹ ರಾಜ್ಯದಲ್ಲಿ 23 ಸಾವಿರ ಶಿಕ್ಷಣ ವಂಚಿತ ಮಕ್ಕಳನ್ನು ಗುರುತಿಸಲಾಗಿದೆ. ಅಂತಹ ಮಕ್ಕಳನ್ನು ಮತ್ತೆ ಶಾಲೆಯತ್ತ ಸೆಳೆಯಲು ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳು, ಆಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಯುವಕ, ಯುವತಿ ಮಂಡಳಗಳು, ಸ್ವಯಂ ಸೇವಾ ಸಂಸ್ಥೆಗಳು, ಶಾಲೆಗಳ ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಎಲ್ಲಾ ನಾಗರಿಕರು  ವೈಯಕ್ತಿಕ ಜವಾಬ್ದಾರಿಯಿಂದ ಈ ಅಭಿಯಾನದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ 193 ಮಕ್ಕಳನ್ನು ಗುರುತಿಸಲಾಗಿದೆ. ಪ್ರಮುಖವಾಗಿ ಎಲ್ಲಾ ಜಿಲ್ಲೆಗಳಲ್ಲಿಯು ಗ್ರಾಮೀಣ ಭಾಗಗಳಲ್ಲಿ ಮತ್ತು ಗಿರಿಜನರು ವಾಸಿಸುವ ಅರಣ್ಯದಂಚಿನ ಪ್ರದೇಶಗಳಲ್ಲಿ ಶಾಲೆಬಿಟ್ಟ ಮಕ್ಕಳ ಸಂಖ್ಯೆ ಜಾಸ್ತಿ ಇದೆ. ಇದಕ್ಕೆ ಪೋಷಕರಿಗೆ ಅರಿವಿನ ಕೊರತೆ ಕಾರಣವಾಗಿದೆ. ಪ್ರಸಕ್ತ ವರ್ಷ ಶಾಲೆಗಳು ಮೇ 28ರಿಂದ ಆರಂಭವಾಗುತ್ತಿವೆ. ಈ ಅಭಿಯಾನದ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಕುಡಿಯುವ ನೀರು, ಶೌಚಾಲಯ, ಶಿಕ್ಷಕರ ಕೊರತೆ ನೀಗಿಸಲು ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಶಾಲೆಗಳಿಗೆ ಆಯೋಗದಿಂದ ಹಂತಹಂತವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕೃಪಾಅಮರ್‍ಆಳ್ವಾ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
 ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಜಿ. ಭಾಸ್ಕರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.            

ಜಿಲ್ಲೆಯ ಅಭಿವೃದ್ಧಿಗೆ ಸಮರ್ಪಕ ಅನುದಾನ ಬಳಕೆ

ಚಾಮರಾಜನಗರ, ಮೇ. 14 - ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಸಹಕಾರ ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್.ಮಹದೇವಪ್ರಸಾದ್ ತಿಳಿಸಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸರ್ಕಾರ ಮೂರು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಾಧನೆಗಳ ಮಾಹಿತಿಯನ್ನೊಳಗೊಂಡ ಪ್ರಗತಿಪಥದತ್ತ ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜಿಲ್ಲೆಯನ್ನು  ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಇಚ್ಚಾಶಕ್ತಿ ತೋರಿದೆ. ಹೀಗಾಗಿ ಹಂತ ಹಂತವಾಗಿ ಜಿಲ್ಲೆಯಲ್ಲಿ ಪ್ರಗತಿಗೆ ಪೂರಕವಾದ ಅನೇಕ ಕೆಲಸಗಳು ಸಾಗಿವೆ. ವೈದ್ಯಕೀಯ ಕಾಲೇಜು, ಬಹುಗ್ರಾಮ ಕುಡಿಯುವ ನೀರು ಯೋಜನೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳು ಕೈಗೆತ್ತಿಕೊಳ್ಳಲು ಸಾಧ್ಯವಾಯಿತೆಂದು ಸಚಿವರು ತಿಳಿಸಿದರು.
ತಾಲ್ಲೂಕಿನ, ಬದನಗುಪ್ಪೆ-ಕೆಲ್ಲಂಬಳ್ಳಿ ದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು ಈಗಾಗಲೇ ರಸ್ತೆ ಕಾಮಗಾರಿ ನಡೆದಿದೆ, ವಿದ್ಯುತ್, ನೀರು ಪೂರೈಸುವ ಸಂಬಂಧ ಕೆಲಸಗಳಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಬಂಡವಾಳಗಾರರನ್ನು ಆಹ್ವಾನಿಸಲು ಈ ಹಿಂದೆಯೇ ಕೊಯಮತ್ತೂರಿನಲ್ಲಿ ರೋಡ್ ಶೋ ನಡೆಸಲಾಗಿದೆ. ಕೈಗಾರಿಕಾ ಪ್ರದೇಶ ಕಾಮಗಾರಿ ಪೂರ್ಣಗೊಂಡರೆ ಉದ್ಯಮಗಳು ಸ್ಥಾಪನೆಯಾಗಿ 25 ಸಾವಿರ ಹೆಚ್ಚು ಜನರಿಗೆ ಉದ್ಯೋಗಾವಕಾಶ ಲಭಿಸಲಿದೆ ಎಂದರು.
ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಲು ಪಂಚಾಯತ್ ರಾಜ್ ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದ ಪರಿಣಾಮ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಸಂಪನ್ಮೂಲ ಕ್ರೋಡಿಕರಿಸಲು ಸಾಧ್ಯವಾಗಿದೆ. ರಾಜ್ಯದಲ್ಲಿ 460 ಗ್ರಾಮ ಪಂಚಾಯತ್‍ಗಳು ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ. ಜಿಲ್ಲೆಯಲ್ಲಿ 10 ಗ್ರಾಮ ಪಂಚಾಯ್ತಿಗಳು ಹೊಸದಾಗಿ ರಚನೆಯಾಗಿ ಕಾರ್ಯ ನಿರ್ವಹಿಸುತ್ತದೆ ಇದರಿಂದ ಅಧಿಕಾರ ವಿಕೇಂದ್ರಿಕರಣ ಆಶಯ ನೆರವೇರಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಮಂತ್ರಿಯವರ ಸಂಸಧೀಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ ಕಳೆದ ಮೂರು ವರ್ಷಗಳಲ್ಲಿ ಜಿಲ್ಲಾ ಕೇಂದ್ರ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುಧಾನ ನೀಡಿದೆ. ಚಿಕ್ಕ ಹೊಳೆ, ಸುವರ್ಣಾವತಿ ನಾಲೆ ಕಾಮಗಾರಿ ಕೈಗೊಳ್ಳಲು 7 ಕೋಟಿ ಅನುಧಾನ ಬಿಡುಗಡೆಯಾಗಿದೆ. ಸರ್ಕಾರ ಇದುವರೆಗೆ ಬಿಡುಗಡೆ ಮಾಡಿರುವ ಅನುಧಾನವನ್ನುಅಭಿವೃದ್ಧಿ ಕೆಲಸಗಳಿಗೆ ಪೂರ್ಣ ಪ್ರಮಾಣದಲ್ಲಿ ಸದ್ವಿನಿಯೋಗ ಮಾಡಲಾಗಿದೆ ಎಂದರು.
ಶಾಸಕರಾದ ಆರ್.ನರೇಂದ್ರ, ಎಸ್.ಜಯಣ್ಣ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ಉಪಾಧ್ಯಕ್ಷರಾದ ಬಸವರಾಜು, ನಗರ ಸಭೆ ಅಧ್ಯಕ್ಷರಾದ ಎಸ್.ಎನ್.ರೇಣುಕ ಉಪಾಧ್ಯಕ್ಷರಾದ ಆರ್.ಎಂ.ರಾಜಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ರಫಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್, ಸಿ.ಎನ್.ಬಾಲರಾಜು, ಶಶಿಕಲಾ ಸೋಮಲಿಂಗಪ್ಪ, ಮಾಜಿ ಲೋಕಸಭೆ ಸದಸ್ಯರಾದ ಸಿದ್ಧರಾಜು ಇತರೆ ಜನ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



ಗಡಿ ಭಾಗದಲ್ಲಿ ಮದ್ಯ ಮಾರಾಟ ನಿಷೇದ

ಚಾಮರಾಜನಗರ, ಮೇ. 14 - ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಹೊಂದಿಕೊಂಡಿರುವ ಗಡಿಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಮೇ 14 ರಿಂದ 16 ವರೆಗೆ ಮದ್ಯಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಬಿ.ರಾಮು ಅವರು ಆದೇಶ ಹೊರಡಿಸಿದ್ದಾರೆ. 
ಮತದಾನವು ಶಾಂತ ರೀತಿಯಲ್ಲಿ ನಡೆಯುವಂತಾಗಲೂ ಜಿಲ್ಲೆಗೆ ಹೊಂದಿಕೊಂಡ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದÀ್ಯದಂಗಡಿಗಳನ್ನು ಮೇ 14 ರ ಬೆಳಿಗ್ಗೆ 10 ಗಂಟೆಯಿಂದ ಮೇ 16 ರ ಮಧ್ಯರಾತ್ರಿ 12 ಗಂಟೆಯವರೆಗೆ ಮುಚ್ಚುವಂತೆ ಆದೇಶಿದ್ದಾರೆ. ಅಲ್ಲದೇ ಅಕ್ರಮ ಸಾಗಾಣಿಕೆ, ದಾಸ್ತಾನು ಮಾಡಬಾರದೆಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.

ಮೇ 16 ರಂದು ಮಹದೇಶ್ವರ ಬೆಟ್ಟದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ
ಚಾಮರಾಜನಗರ, ಮೇ. 14 - ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಮೇ 16 ರಂದು ಬೆಳಿಗ್ಗೆ 9.30 ಗಂಟೆಗೆ ಮಹದೇಶ್ವರ ಬೆಟ್ಟದ ದೇವಾಲಯದ ಬಯಲು ರಂಗಮಂದಿರ ಆವರಣದಲ್ಲಿ ನಡೆಯಲಿದೆ.
ಸಹಕಾರ ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್.ಮಹದೇವಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಅಬಕಾರಿ ಹಾಗೂ ಮುಜರಾಯಿ ಸಚಿವರಾದ ಮನೋಹರ್ ತಹಶೀಲ್ದಾರ್ ವಧು-ವರರಿಗೆ ಮಾಂಗಲ್ಯ ವಿತರಿಸುವರು. ಸಾಲೂರು ಬೃಹನ್ಮಠಾಧ್ಯಕ್ಷರಾದ ಪಟ್ಟದ ಗುರುಸ್ವಾಮಿ ಅವರು ದಿವ್ಯ ಸಾನಿಧ್ಯ ವಹಿಸುವರು. ಶಾಸಕರಾದ ಆರ್.ನರೇಂದ್ರ ಅಧ್ಯಕ್ಷತೆ ವಹಿಸುವರು.
ವಿಧಾನಪರಿಷತ್ ಉಪ ಸಭಾಪತಿಯವರಾದ ಮರಿತಿಬ್ಬೇಗೌಡ, ಸಂಸದೀಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ, ಶಾಸಕರಾದ ಎಸ್.ಜಯಣ್ಣ, ಗೋ.ಮಧುಸೂದನ್, ಸಂದೇಶ್ ನಾಗರಾಜು, ಆರ್.ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್.ಬಸವರಾಜು, ಜಿಲ್ಲಾ ಪಂಚಾಯತ್ ಸದಸ್ಯರಾದ ಇರ್ಷಾದ್‍ಭಾನು, ತಾಲ್ಲೂಕು ಪಂಚಾಯತ್ ಸದಸ್ಯರಾದ ಹಲಗ ತಂಬಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರುಕ್ಮಿಣಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.

   











No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು