ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ
ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇಂದಿರಾ ಕ್ಯಾಂಟೀನ್, ಆಸ್ಪತ್ರೆ, ಹಾಸ್ಟೆಲ್ ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲು ಜಿಲ್ಲಾಧಿಕಾರಿ ಕಚೇರಿ ಯ ಗೇಟ್ ಬಳಿ ಪಕ್ಕದ ಇಂದಿರಾ ಕ್ಯಾಂಟೀನ್ ಗೆ ಅನಿರೀಕ್ಷಿತ ಭೇಟಿ ನೀಡಿ ಅಡುಗೆ ಸಾಮಾಗ್ರಿಗಳು, ದಿನಸಿ ದಾಸ್ತಾನು ವೀಕ್ಷಣೆ ಮಾಡಿದರು.ಶುಚಿತ್ವ,ಆಹಾರ ವಿತರಣೆ,ಮೆನು ಪರಿಶೀಲಿಸಿದರು.
ರಾತ್ರಿ ಗ್ರಾಹಕರಿಗೆ ವಿತರಿಸಲು ಸಿದ್ದಪಡಿಸಲಾಗಿದ್ದ ರೈಸ್ ಬಾತ್ ಅನ್ನು ಜಿಲ್ಲಾಧಿಕಾರಿ ಅವರು ಸೇವಿಸಿದರು.
ಪ್ರತಿದಿನ ಟೋಕನ್ ವಿತರಿಸಬೇಕು.ಆ ಪ್ರಕಾರವೇ ಆಹಾರ ನೀಡಬೇಕು.ಆಹಾರದಲ್ಲಿ ಗುಣಮಟ್ಟ,ಶುಚಿತ್ವ ಕಾಪಾಡಿ ಕೊಳ್ಳ ಬೇಕು.ಎಲ್ಲಿಯೂ ಲೋಪಗಳಾಗಾದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಕ್ಯಾಂಟೀನ್ ಗೆ ಸಿ.ಸಿ.ಕೆಮರಾ ಅಳವಡಿಸಬೇಕು.ಪ್ರತಿ ನಿತ್ಯ ಎಷ್ಟು ಮಂದಿಗೆ ಆಹಾರ ವಿತರಿಸಲಾಗಿದೆ ಎಂಬ ಪೂರ್ಣ ವರದಿ ಲೆಕ್ಕ ಪತ್ರ ಸಲ್ಲಿಸುವಂತೆ ಕ್ಯಾಂಟೀನ್ ನಿರ್ವಾಹಕ ರಿಗೆ ಜಿಲ್ಲಾಧಿಕಾರಿ ಅವರು ತಾಕೀತು ಮಾಡಿದರು.
ಬಳಿಕ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಇರುವ ತಾಯಿಮಕ್ಕಳ ಆಸ್ಪತ್ರೆ ಹಾಗೂ ತುರ್ತು ನಿಗಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯರ ಆರೋಗ್ಯ ವಿಚಾರಿಸಿದರು. ಚಿಕಿತ್ಸೆ ಹೇಗೆ ನೀಡಲಾಗುತ್ತಿದೆ? ವೈದ್ಯಕೀಯ ಸೇವೆ ಸರಿಯಾಗಿ ಸಿಗುತ್ತಿದೆಯೇ ಎಂದು ಪ್ರಶ್ನಿಸಿದರು.
ತೀವ್ರತರ ಮಕ್ಕಳ ನಿಘಾ ಘಟಕ,ಅಪೌಷ್ಟಿಕತೆ ಮಕ್ಕಳ ನಿರ್ವಹಣೆ ವಿಭಾಗಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.ಅಪೌಷ್ಟಿಕತೆ ನಿವಾರಣೆಗೆ ಅನುಸರಿಸಲಾಗುತ್ತಿರುವ ವಿಧಾನಗಳ ಬಗ್ಗೆ ಮಾಹಿತಿ ಪಡೆದರು. ಈ ಸಂಬಂಧಿಸಿದಂತೆ ಅಗತ್ಯವಾದ ಸೂಚನೆ ನೀಡಿದರು.