Wednesday, 29 March 2023

29-03-2023 ವಿಧಾನಸಭಾ ಸಾರ್ವತ್ರಿಕ ಚುನಾವಣೆ : ನೀತಿ ಸಂಹಿತೆ ಉಲ್ಲಂಘನೆ ವಿರುದ್ದ ಕ್ರಮ -ಜಿಲ್ಲಾಧಿಕಾರಿ ಡಿ.ಎಸ್. ರಮೇಶ್

ವಿಧಾನಸಭಾ ಸಾರ್ವತ್ರಿಕ ಚುನಾವಣೆ : ನೀತಿ ಸಂಹಿತೆ ಉಲ್ಲಂಘನೆ ವಿರುದ್ದ ಕ್ರಮ -ಜಿಲ್ಲಾಧಿಕಾರಿ ಡಿ.ಎಸ್. ರಮೇಶ್
*ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
       ಚಾಮರಾಜನಗರ, ಮಾರ್ಚ್ 29- ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿಸಿದವರ ವಿರುದ್ದ ಪ್ರಜಾ ಪ್ರಾತಿನಿದ್ಯ ಕಾಯ್ದೆ ಅನ್ವಯ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.

      ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಯವರು ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲ ಕ್ರಮ ವಹಿಸಲಾಗಿದೆ ಎಂದರು. 

      ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಪಾಲನೆಗಾಗಿ ಪ್ರತೀ ವಿಧಾನಸಭಾ ಕ್ಷೇತ್ರಗಳ 10 ರಿಂದ 12 ಮತಗಟ್ಟೆಗಳಿಗೆ ಒಬ್ಬರಂತೆ ಒಟ್ಟು 97 ಸೆಕ್ಟರ್ ಅಧಿಕಾರಿಗಳು ಹಾಗೂ ಚುನಾವಣಾ ಅಕ್ರಮ ದೂರುಗಳಿಗೆ ಸಂಬಂಧಿಸಿದಂತೆ ಕಾರ್ಯೋನ್ಮುಖರಾಗಲು 12 ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ನೇಮಿಸಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ನಿಗಾ ಇಡಲು ವಿಧಾನಸಭಾ ಕ್ಷೇತ್ರವಾರು ಮಾದರಿ ನೀತಿ ಸಂಹಿತೆ ತಂಡ ನೇಮಕ ಮಾಡಲಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಮಾದರಿ ನೀತಿ ಸಂಹಿತೆಯ ಜಿಲ್ಲಾ ನೋಡಲ್ ಅಧಿಕಾರಿಗಳಾಗಿದ್ದಾರೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. 
      
      ಚುನಾವಣೆ ವೇಳಾ ಪಟ್ಟಿ ಪ್ರPಟವಾಗಿದ್ದು ಏಪ್ರಿಲ್ 13ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕಡೆಯ ದಿನವಾಗಿದೆ. ಏಪ್ರಿಲ್ 21ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಏಪ್ರಿಲ್ 24ರಂದು ನಾಮಪತ್ರಗಳನ್ನು ಹಿಂಪಡೆಯಲು ಕಡೆಯ ದಿನವಾಗಿದೆ. ಮೇ 10ರಂದು ಮತದಾನ ನಡೆಯಲಿದೆ. ಮೇ 13ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಮೇ 15ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಇಂದಿನಿಂದ ಮೇ 15ರವರೆಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. 

      ಜಿಲ್ಲೆಯಲ್ಲಿ ಒಟ್ಟು 982 ಮತಗಟ್ಟೆಗಳನ್ನು ತೆರೆಯಲಾಗಿದೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ 253, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 241, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 239, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 249 ಮತಗಟ್ಟೆಗಳಿವೆ. ನಗರ ಪ್ರದೇಶದÀಲ್ಲಿ 287, ಗ್ರಾಮಾಂತರ ಪ್ರದೇಶದಲ್ಲಿ 695 ಮತಗಟ್ಟೆಗಳು ಸ್ಥಾಪಿಸಲಾಗಿದೆ. 

      ಜಿಲ್ಲೆಯಲ್ಲಿ 422963 ಪುರುಷರು, 431226 ಮಹಿಳೆಯರು, 68 ಇತರರು ಸೇರಿದಂತೆ ಒಟ್ಟು 854257 ಮತದಾರರಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 110797 ಪುರುಷರು, 108387 ಮಹಿಳೆಯರು, 16 ಇತರರು ಸೇರಿದಂತೆ ಒಟ್ಟು 219200 ಮತದಾರರಿದ್ದಾರೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 106235 ಪುರುಷರು, 108909 ಮಹಿಳೆಯರು, 18 ಇತರರು ಸೇರಿದಂತೆ ಒಟ್ಟು 215162 ಮತದಾರರಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 101744 ಪುರುಷರು, 106012 ಮಹಿಳೆಯರು, 15 ಇತರರು ಸೇರಿದಂತೆ ಒಟ್ಟು 207771 ಮತದಾರರಿದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 104187 ಪುರುಷರು, 107918 ಮಹಿಳೆಯರು, 19 ಇತರರು ಸೇರಿದಂತೆ ಒಟ್ಟು 212124 ಮತದಾರರಿದ್ದಾರೆ. ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟಾರೆ 195 ಸೇವಾ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿಯವರು ಮಾಹಿತಿ ನೀಡಿದರು. 

      ಚುನಾವಣಾ ಆಯೋಗದ ನಿರ್ದೆಶನದಂತೆ ವಿಕಲಚೇತನ ಮತದಾರರು ಹಾಗೂ 80 ವರ್ಷ ಮೇಲ್ಪಟ್ಟ ವಯೋಮಾನದ ಹಾಸಿಗೆ ಹಿಡಿದಿರುವ ಮತ ಚಲಾಯಿಸಲು ಶಕ್ತರಲ್ಲದ ಹಿರಿಯ ನಾಗರಿಕರು ಅಂಚೆ ಮೂಲಕ ಮತ ಚಲಾಯಿಸಲು ಅವರಿಗೆ ಅಂಚೆ ಮತ ಪತ್ರ ನೀಡಲು ವ್ಯವಸ್ಥೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 11965 ವಿಕಲಚೇತನ ಮತದಾರರಿದ್ದಾರೆ. ಒಟ್ಟು 23300 ಮಂದಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ ಮತದಾರರಿದ್ದಾರೆ. 

      ಸಾರ್ವಜನಿಕರಿಂದ ದುರವಾಣಿ ಮತ್ತು ಆನ್‍ಲೈನ್ ಮೂಲಕ ಸ್ವೀಕೃತವಾಗುವ ದೂರುಗಳನ್ನು ಇತ್ಯರ್ಥ ಪಡಿಸಲು ಜಿಲ್ಲಾ ಕೇಂದ್ರದಲ್ಲಿ 24*7 ಅವಧಿಯಲ್ಲಿ ಕರ್ತವ್ಯ ನಿರ್ವಹಿಸಲು ಜಿಲ್ಲಾ ಸಂಪರ್ಕ ಕೇಂದ್ರ ತೆರೆಯಲಾಗಿದೆ. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ಹಾಗೂ ದೂರು ಸಲ್ಲಿಸಲು ಟೋಲ್ ಫ್ರೀ ಸಂಖ್ಯೆ 1950 ಗೆ ಕರೆ ಮಾಡಬಹುದಾಗಿದೆ. ಜಿಲ್ಲೆಯಲ್ಲಿ ಮುಕ್ತ, ನ್ಯಾಯ ಸಮ್ಮತ, ಪಾರದರ್ಶಕ ಚುನಾವಣೆಗೆ ಎಲ್ಲರೂ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.

      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ ಅವರು ಮಾತನಾಡಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಕುರಿತು ನಿಗಾ ವಹಿಸಲು ವಿಧಾನಸಭಾ ಕ್ಷೇತ್ರವಾರು ಮಾದರಿ ನೀತಿ ಸಂಹಿತೆ ತಂಡ ಇರಲಿದೆ. ಜಿಲ್ಲಾ ಕೇಂದ್ರದಲ್ಲಿ ಎಂಸಿಎಂಸಿ ತಂಡ, ವೀಡಿಯೋ ಸರ್ವಲೆನ್ಸ್, ವೀಡಿಯೋ ವೀವಿಂಗ್ ತಂಡಗಳು ಕಾರ್ಯನಿರ್ವಹಿಸಲಿವೆ ಎಂದರು. 

       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ ಅವರು ಮಾತನಾಡಿ ಅಂತರ್ ರಾಜ್ಯ ಹಾಗೂ ಅಂತರ ಜಿಲ್ಲೆಗಳಿಗೆ ಸಂಚರಿಸುವ ವಾಹನಗಳ ಮೇಲೆ ನಿಗಾ ಇಡಲು ಜಿಲ್ಲಾ ವ್ಯಾಪ್ತಿಯಲ್ಲಿ 11 ಅಂತರರಾಜ್ಯ ಹಾಗೂ 8 ಅಂತರ ಜಿಲ್ಲಾ ಚೆಕ್‍ಪೋಸ್ಟ್ ಗಳನ್ನು ತೆರೆಯಲಾಗಿದ್ದು ಪೊಲೀಸ್, ಕಂದಾಯ ಇನ್ನಿತರೆ ಇಲಾಖೆಗಳ ಅಧಿಕಾರಿಗಳ ತಂಡ ನಿಯೋಜಿಸಲಾಗಿದೆ ಎಂದರು. 

     ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಸುದ್ದಿಗೋಷ್ಠಿಯಲ್ಲಿ ಇದ್ದರು.




ವಿಧಾನಸಭಾ ಚುನಾವಣೆ : ಶಸ್ತ್ರಾಸ್ತ್ರ ಠೇವಣಿಗೆ ಜಿಲ್ಲಾಧಿಕಾರಿ ಆದೇಶ

       ಚಾಮರಾಜನಗರ, ಮಾರ್ಚ್ 29 :- ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಅಧಿಕೃತವಾಗಿ ಶಸ್ತ್ರಾಸ್ತ್ರ (ಬಂದೂಕು) ಪರವಾನಗಿ ಹೊಂದಿರುವ ಪರವಾನಗಿದಾರರನ್ನು ಗುರುತಿಸಿ ಸದರಿಯವರಿಗೆ ನೋಟಿಸ್ ಜಾರಿ ಮಾಡಿ ಪರವಾನಗಿ ಹೊಂದಿರುವ ಆಯುಧಗಳನ್ನು (ಬಂದೂಕು) ದಂಡ ಪ್ರಕ್ರಿಯ ಸಂಹಿತಾ 1973 ಕಲಂ 144ರಡಿಯಲ್ಲಿ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗುವವರೆಗೂ ಸಂಬಂಧಪಟ್ಟ ಪೊಲೀಸ್ ಠಾಣೆಗಳ ವಶಕ್ಕೆ ಕೂಡಲೇ ಪಡೆಯುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಆದೇಶಿಸಿದ್ದಾರೆ. 

      ವಿಧಾನಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು ಮಾರ್ಚ್ 29ರಿಂದ ಮೇ 15ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಚುನಾವಣೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಪರವಾನಗಿ ಪಡೆದು ಹೊಂದಿರುವ ಶಸ್ತ್ರಾಸ್ತ್ರಗಳನ್ನು (ಬಂದೂಕು) ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವ ಸಂಬಂಧ ಸ್ಕ್ರೀನಿಂಗ್ ಕಮಿಟಿ ರಚಿಸಲಾಗಿದೆ. 

      ಚುನಾವಣೆ ಘೋಷಣೆಯಾಗಿದ್ದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕರು ಪರವಾನಗಿ ಪಡೆದು ಹೊಂದಿರುವಂತಹ ಶಸ್ತ್ರಾಸ್ತ್ರಗಳನ್ನು (ಬಂದೂಕು) ಠೇವಣಿ ಕುರಿತಂತೆ ಭಾರತ ಚುನಾವಣಾ ಆಯೋಗ ದಿನಾಂಕ 01-09-2009ರ ಪತ್ರದಲ್ಲಿ ನಿರ್ದೆಶನಗಳನ್ನು ಹೊರಡಿಸಿದೆ. ಅದರನ್ವಯ ಪರಿಶೀಲಿಸಿ ಅಧಿಕೃತವಾಗಿ ಶಸ್ತ್ರಾಸ್ತ್ರ (ಬಂದೂಕು) ಪರವಾನಗಿ ಹೊಂದಿರುವ ಪರವಾನಗಿದಾರರನ್ನು ಗುರುತಿಸಿ ಸದರಿಯವರಿಗೆ ನೋಟಿಸ್ ಜಾರಿ ಮಾಡಿ ಪರವಾನಗಿ ಹೊಂದಿರುವ ಆಯುಧಗಳನ್ನು (ಬಂದೂಕು) ದಂಡ ಪ್ರಕ್ರಿಯ ಸಂಹಿತಾ 1973 ಕಲಂ 144ರಡಿಯಲ್ಲಿ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗುವವರೆಗೂ ಸಂಬಂಧಪಟ್ಟ ಪೊಲೀಸ್ ಠಾಣಾಗಳ ವಶಕ್ಕೆ ಕೂಡಲೇ ಪಡೆಯುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

 

Sunday, 26 March 2023

26-03-2023 ಚಾಮರಾಜನಗರ ಸುದ್ದಿ

64ಕ್ಕೂ ಹೆಚ್ಚು ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ನೇರ ನೆರವು : ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ 

 

       ಚಾಮರಾಜನಗರ. ಮಾರ್ಚ್ 26:- ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಸುಮಾರು 64ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಡಿಬಿಟಿ ಮೂಲಕ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಸಹಾಯಧನ, ಪ್ರೋತ್ಸಾಹಧನ ಹಾಗೂ ಇತರೆ ಸೌಲಭ್ಯಗಳು ಜಮೆಯಾಗುತ್ತಿದೆ ಎಂದು ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.


      ಗುಂಡ್ಲುಪೇಟೆಯ ಡಿ. ದೇವರಾಜ ಅರಸು ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.


      ಯಾವುದೇ ಅಭಿವೃದ್ದಿ ಕಾರ್ಯವು ಜನರ ಸಕ್ರಿಯ ಸಹಭಾಗಿತ್ವ ಮತ್ತು ಸಹಕಾರವಿಲ್ಲದೆ ಪೂರ್ಣವಾಗುವುದಿಲ್ಲ. ಸಧೃಢ ಭಾರತ ನಿರ್ಮಾಣಕ್ಕೆ ಸರ್ಕಾರ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ್, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ, ಪ್ರಧಾನಮಂತ್ರಿ ಉಜ್ವಲ್ ಯೋಜನೆ, ರಾಷ್ಟ್ರೀಯ ಆರೋಗ್ಯ ಮಿಷನ್, ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಸೇರಿದಂತೆ ಹಲವು ಯೋಜನೆಗಳು ಜಾರಿಯಲ್ಲಿವೆ ಎಂದರು. 


      ಗಡಿ ಜಿಲ್ಲೆ ಚಾಮರಾಜನಗರದ ಅಭಿವೃದ್ದಿಗೆ ಸರ್ಕಾರ ಬದ್ದವಾಗಿದ್ದು, ಕಳೆದ ಡಿಸೆಂಬರ್ 13ರಂದು ಮುಖ್ಯಮಂತ್ರಿಯವರು ಜಿಲ್ಲೆಗೆ ಭೇಟಿ ನೀಡಿ ಸುಮಾರು 1,099 ಕೋಟಿ ರೂ. ವೆಚ್ಚದ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಚಾಮರಾಜನಗರ ಮತ್ತು ಹನೂರಿನಲ್ಲಿ ನಡೆದ ಮುಖ್ಯಮಂತ್ರಿಯವರ ಎರಡು ಕಾರ್ಯಕ್ರಮಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿದ ಜಿಲ್ಲೆಯ ಜನತೆಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು. 


      2022-23ನೇ ಸಾಲಿನಲ್ಲಿ ಪ್ರವಾಹದಿಂದ ಹಾನಿಯಾದ 1,750 ಮನೆಗಳಿಗೆ 12.78 ಕೋಟಿ ಪರಿಹಾರ ಮಂಜೂರು ಮಾಡಲಾಗಿದೆ. ಪ್ರವಾಹದಿಂದ ಹಾನಿಗೀಡಾದ 8,052 ಹೆಕ್ಟೇರ್ ವಿಸ್ತೀರ್ಣದ 14,949 ರೈತ ಫಲಾನುಭವಿಗಳಿಗೆ 15 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಸುತ್ತುನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 2,432 ಸ್ವ ಸಹಾಯ ಸಂಘಗಳಿಗೆ 35.70 ಕೋಟಿ ಸಮುದಾಯ ಬಂಡವಾಳ ನಿಧಿ ನೀಡಲಾಗಿದೆ ಎಂದರು.


      ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಇದುವರೆಗೆ 3,176 ಫಲಾನುಭವಿಗಳಿಗೆ ಒಟ್ಟು 2,541 ಲಕ್ಷ ಸಹಾಯಧನ ನೀಡಲಾಗಿದೆ. ನರೇಗಾ ಯೋಜನೆಯಡಿ ಈವರೆಗೆ 5.05 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು 1,435 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು. 


      ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ.ಎಸ್. ನಿರಂಜನ್ ಕುಮಾರ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಉಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಸ್ವಚ್ಚತಾ ಅಭಿಯಾನದ ಮೂಲಕ ಪ್ರತಿಯೊಬ್ಬರ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಹೆಣ್ಣು ಮಕ್ಕಳ ಹಿತದೃಷ್ಠಿಯಿಂದ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದರು. 


       ಶಾಸಕರಾದ ಎನ್. ಮಹೇಶ್ ಅವರು ಮಾತನಾಡಿ ಹೆಣ್ಣು ಮಕ್ಕಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹಿಳಾ ಪೂರಕ ಯೋಜನೆಗಳಿಂದ ರಾಜ್ಯದ ಉನ್ನತ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಮಹಿಳೆಯರು ಮುಂದಿದ್ದಾರೆ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ ಎಂದರು. 


      ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಇತರೆ ಗಣ್ಯರು ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು. ವಿವಿಧ ಇಲಾಖೆಗಳು ತೆರೆದಿದ್ದ ಯೋಜನೆ ಮಾಹಿತಿ ಮಳಿಗೆಗಳನ್ನು ಉದ್ಘಾಟಿಸಿದರು. 

     

       ವಿಧಾನಪರಿಷತ್ತಿನ ಸದಸ್ಯರಾದ ವೈ. ನಾರಾಯಣಸ್ವಾಮಿ, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು, ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷರಾದ ಪಿ. ಗಿರೀಶ್, ಉಪಾಧ್ಯಕ್ಷರಾದ ದೀಪಿಕಾ ಅಶ್ವಿನ್, ಸದಸ್ಯರಾದ ಜಿ.ಎಸ್. ಕಿರಣ್, ವಿಧಾನಪರಿಷತ್ತಿನ ಮಾಜಿ ಸದಸ್ಯರಾದ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಗೀತಾ ಹುಡೇದ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

----------

     

      ಆನೆಮಡುವಿನ ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಚಾಲನೆ 

 

       ಚಾಮರಾಜನಗರ. ಮಾರ್ಚ್ 26 - ತಾಲೂಕಿನ ಉಡಿಗಾಲ ಗ್ರಾಮದಲ್ಲಿ ಆನೆಮಡುವಿನ ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಇಂದು ಭೂಮಿ ಪೂಜೆ ನೆರವೇರಿಸಿದರು. 


       ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆ ಅಭಿವೃಧ್ದಿಗೆ ಮೂಲ ಸೌಲಭ್ಯಗಳು ಅಗತ್ಯವಾಗಿವೆ. ಈ ನಿಟ್ಟಿನಲ್ಲಿ ಕ್ರಮ ವಹಿಸಿದ್ದು, ಇಂದು ಈ ಭಾಗದ ಜನರ ಬೇಡಿಕೆಯಂತೆ ಆನೆಮಡುವಿನ ಕೆರೆಗೆ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದು ಒಳ್ಳೆಯ ಕೆಲಸ. ಇದರ ಸದುಪಯೋಗ ಮಾಡಿಕೊಳ್ಳಿ ಎಂದರು. 


      ಮುಖ್ಯಮಂತ್ರಿಗಳು ಎಲ್ಲಾ ವರ್ಗದವರಿಗು ಸಮಾನತೆ ಕೊಟ್ಟು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಜಿಲ್ಲೆಯ ವಿವಿಧ ಗ್ರಾಮಗಳ ಮೂಲ ಸೌಕರ್ಯ ಅಭಿವೃದ್ದಿಗೆ 26.5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 100 ರಿಂದ 150 ಎಕರೆ ಜಮೀನು ಲಭ್ಯವಾದರೆ 10 ಸಾವಿರ ಎಕರೆಗೆ ನೀರಾವರಿ ಸೌಲಭ್ಯಕ್ಕೆ ಹೊಸದಾಗಿ ಕೆರೆ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು. 


      ಶಿಕ್ಷಣ, ನೀರಾವರಿ, ವಿದ್ಯುತ್ ಇನ್ನಿತರ ಸೌಕರ್ಯಗಳು ಪ್ರಗತಿಗೆ ಪೂರಕವಾಗಿವೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ನಮ್ಮೆಲ್ಲರ ಆದ್ಯತೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.


     ರೈತ ಮುಖÀಂಡರಾದ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ ಆನೆಮಡುವಿನ ಕೆರೆಗೆ ನೀರು ಹರಿಸಲು ಮುಂದಾಗಿರುವುದರಿಂದ ಈ ಭಾಗದ ಕೃಷಿ ಪಂಪ್‍ಸೆಟ್‍ಗಳಿಗೆ ಅಂತರ್ಜಲ ಹೆಚ್ಚಳಕ್ಕೆ ಸಹಾಯವಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೆರೆಗೆ ನೀರು ತುಂಬಿಸುವ ಭರವಸೆಯನ್ನು ಈಡೇರಿಸಿದ್ದು, ಕಾಮಗಾರಿ ಆರಂಭಕ್ಕೆ ಚಾಲನೆ ದೊರೆತಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. 


       ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ, ವಿಧಾನಪರಿಷತ್ತಿನ ಮಾಜಿ ಸದಸ್ಯರಾದ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಮುಖಂಡರಾದ ಎ.ಆರ್. ಬಾಲರಾಜು, ಪ್ರಭುಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ನಾಗಣ್ಣ, ರಾಮಚಂದ್ರ, ಶಿವಬಸಪ್ಪ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

     ---------


ವಸತಿ ಯೋಜನೆಗಳಲ್ಲಿ ಮೂಲಸೌಕರ್ಯಕ್ಕೆ ವಿಶೇಷ ಆದ್ಯತೆ : ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ 

 

       ಚಾಮರಾಜನಗರ. ಮಾರ್ಚ್ 26 - ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಸತಿ ಸೌಲಭ್ಯವನ್ನು ಕಲ್ಪಿಸುವಾಗ ಮೂಲ ಸೌಕರ್ಯಗಳಿಗೆ ವಿಶೇಷ ಆದ್ಯತೆ ನೀಡುವಂತೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.


      ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ದಿ ಕೋಶ ಮತ್ತು ನಗರಸಭೆ ವತಿಯಿಂದ ನಗರಸಭೆ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮಹಿಳೆಯರು ಹಾಗೂ ಪೌರಕಾರ್ಮಿಕರಿಗೆ ವಿಶೇಷ ಸವಲತ್ತುಗಳು, ಮನೆಗಳ ಹಸ್ತಾಂತರ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. 


      ವಸತಿ ಯೋಜನೆ ನೀಡುವಾಗಲೇ ನೀರು, ಶೌಚಾಲಯ, ಇನ್ನಿತರ ಮೂಲ ಸೌಲಭ್ಯಗಳು ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು. ದೂರದೃಷ್ಠಿಯಿಂದ ಬಡವರ ಕೆಲಸ ಮಾಡಿಕೊಡಬೇಕು. ಎಲ್ಲಿಯೂ ತೊಂದರೆ ಆಗದ ಹಾಗೆ ಜನರಿಗೆ ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಉಸ್ತುವಾರಿ ಸಚಿವರು ತಿಳಿಸಿದರು. 


      ಬಡವರಿಗೆ ಸೂರು ಅತ್ಯಂತ ಅವಶ್ಯಕವಾಗಿದೆ. ವಸತಿ ಯೋಜನೆ ಸಿಕ್ಕರೆ ಅವರ ಜೀವನದಲ್ಲಿ ಆನಂದ, ನೆಮ್ಮದಿ ಕಾಣಬಹುದು. ಭವಿಷ್ಯದ ಹಿತದೃಷ್ಠಿಯಿಂದ ಮನೆಗಳನ್ನು ನೀಡಬೇಕಾಗುತ್ತದೆ. ಒಳ್ಳೆಯ ಕಾರ್ಯದಲ್ಲಿ ಎಲ್ಲರು ತೊಡಗಿಕೊಳ್ಳೋಣ ಎಂದು ಸಚಿವರು ತಿಳಿಸಿದರು.


      ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ವಸತಿ, ಮೂಲ ಸೌಕರ್ಯಗಳು ಜನರಿಗೆ ಅತ್ಯಗತ್ಯವಾಗಿವೆ. ಮಹಿಳೆಯರಿಗೆ ಇಂದು ನೀಡಲಾಗುತ್ತಿರುವ ಹೊಲಿಗೆಯಂತ್ರಗಳಿಂದ ಆರ್ಥಿಕವಾಗಿ ಅನುಕೂಲವಾಗಲಿದೆ. ಸೌಲಭ್ಯಗಳಿಂದ ಜನರ ಜೀವನ ಹಸನಾಗಲಿ ಎಂದು ಆಶಿಸಿದರು. 


      ಇದೇ ವೇಳೆ ಗಣ್ಯರು ಮಹಿಳೆಯರಿಗೆ ಹೊಲಿಗೆಯಂತ್ರಗಳನ್ನು ವಿತರಿಸಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ, ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆಗಳ ಕೀ ಹಸ್ತಾಂತರಿಸಿದರು.


      ನಗರಸಭೆ ಅಧ್ಯಕ್ಷರಾದ ಆಶಾ ನಟರಾಜು, ಉಪಾಧ್ಯಕ್ಷರಾದ ಸುಧಾ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷರಾದ ಎಂ. ರಾಮಚಂದ್ರ, ನಗರಸಭಾ ಸದಸ್ಯರಾದ ಮನೋಜ್ ಪಟೇಲ್, ಮಹೇಶ್, ಕಲಾವತಿ, ಶಿವರಾಜ್, ರಾಘವೇಂದ್ರ, ನಗರಸಭೆ ಪೌರಾಯುಕ್ತರಾದ ಎಸ್.ವಿ. ರಾಮ್‍ದಾಸ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

---

ಶಂಕರದೇವರ ಗುಡ್ಡದ ರಸ್ತೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಶಂಕುಸ್ಥಾಪನೆ 

 

       ಚಾಮರಾಜನಗರ. ಮಾರ್ಚ್ 26 - ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದ ಶಂಕರದೇವರ ಗುಡ್ಡದ ಬಳಿ ರಸ್ತೆ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದರು. 


      ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ದೇವಾಲಯದ ಭಕ್ತಾಧಿಗಳಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಬೇಕಿದೆ. ಈ ಉದ್ದೇಶದಿಂದ ರಸ್ತೆ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.


      ದೇವಾಲಯ ಸುತ್ತಮುತ್ತಲ ಪ್ರದೇಶ ಸುಂದರವಾಗಿದೆ. ದೇವಾಲಯದ ಅಭಿವೃದ್ದಿಗೆ ಆದ್ಯತೆ ನೀಡಿ ಇನ್ನಷ್ಟು ಸೌಕರ್ಯಗಳನ್ನು ನೀಡುವ ಮೂಲಕ ಹೆಚ್ಚು ಭಕ್ತಾದಿಗಳು ಬರುವಂತಾಗಬೇಕು. ಇದಕ್ಕೆ ಪೂರಕವಾಗಿರುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು. 


      ಉಪವಿಭಾಗಾಧಿಕಾರಿ ಗೀತಾ ಹುಡೇದ, ಮುಖಂಡರಾದ ಮಂಗಲ ಶಿವಕುಮಾರ್, ಉಪ್ಪಾರ ಶ್ರೀಗಳಾದ ಮಂಜುನಾಥಸ್ವಾಮಿ, ಗೌಡಿಕೆ ಮಹದೇವಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವಿನಯ್ ಕುಮಾರ್, ಆರ್.ಸಿ. ಕೆಂಪರಾಜು, ನಾಗು ರಮೇಶ್ ಇತರರು ಈ ಸಂದರ್ಭದಲ್ಲಿ ಇದ್ದರು.



















 

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು