Tuesday, 7 May 2019

ಕಾಯಕವೇ ಕೈಲಾಸದ ಕಾಯಕಯೋಗಿ ಬಸವಣ್ಣನವರು: ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ (07-04-2019)



ಕಾಯಕವೇ ಕೈಲಾಸದ ಕಾಯಕಯೋಗಿ ಬಸವಣ್ಣನವರು: ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ  
ಚಾಮರಾಜನಗರ, ಮೇ. 07 :  ಕಾಯಕವೇ ಕೈಲಾಸ ತತ್ವದ ಮೂಲಕ ದುಡಿಮೆಯಲ್ಲಿ ದೇವರನ್ನು ಕಂಡ ಕಾಯೋಕಯೋಗಿ ಬಸವಣ್ಣನವರು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಅಭಿಪ್ರಾಯ ಪಟ್ಟರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಸರಳವಾಗಿ ಆಯೋಜಿಸಲಾಗಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುವೆಂಪು ಅವರು 20ನೇ ಶತಮಾನದಲ್ಲಿ ವಿಶ್ವಮಾನವತೆಯ ಕನಸು ಕಂಡಿದ್ದರು. ಅದನ್ನು ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಾರಿ ಮಾಡಿದ್ದರು. ಜನಸಾಮಾನ್ಯರಿಗೆ ಅರ್ಥವಾಗುವ ಸರಳಭಾಷೆ ಕನ್ನಡದಲ್ಲಿ ಸಾಕಷ್ಟು ವಚನಗಳನ್ನು ರಚಿಸಿ ಅರಿವಿನ ಬೆಳಕನ್ನು ತೋರಿ ಸಮ ಸಮಾಜಕ್ಕೆ ನಾಂದಿ ಹಾಡಿದರು. ಶೈಕ್ಷಣಿಕ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದರು ಎಂದರು.
ಬಸವಣ್ಣನವರು ಅನುಭವ ಮಂಟಪದ ಮೂಲಕ ದೇಶದ ಮೊದಲ ಸಂಸತ್ತನ್ನು ಸ್ಥಾಪಿಸಿ ಅಲ್ಲಿ ಸಾಮಾಜಿಕ, ಧಾರ್ಮಿಕ ಚರ್ಚೆಗಳನ್ನು ನಡೆಸುತ್ತಿದ್ದರು. ಅಂದಿನ ಸಮಾಜದಲ್ಲಿದ್ದ ಜಾತಿವ್ಯವಸ್ಥೆ, ವರ್ಣಬೇಧ ಲಿಂಗಬೇಧವನ್ನು ದಿಕ್ಕರಿಸಿ ಬಡವರು, ದೀನ ದಲಿತರು, ಮಹಿಳೆಯರನ್ನು ಅನುಭವ ಮಂಟಪದಲ್ಲಿ ಒಂದೆಡೆ ಸೇರಿಸಿ ಕ್ರಾಂತಿಕಾರಿ ವಿಚಾರಗಳನ್ನು ವಚನಗಳ ಮೂಲಕ ಜನರಿಗೆ ತಲುಪಿಸಿದರು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಾತಿ ಭಾಷೆಯ ಬೇಧವಿಲ್ಲದೆ ಲಿಂಗಶರಣ ತತ್ವವನ್ನು ಪ್ರತಿಪಾದಿಸಿದ ಬಸವಣ್ಣನವರು ತಳ ಸಮುದಾಯದವರಿಗೆ ದೇವಾಲಯ ಹಾಗೂ ಊರಿನ ಒಳಗಡೆ ಪ್ರವೇಶ, ಕುಡಿಯುವ ನೀರಿನ ಹಕ್ಕು, ಮಹಿಳೆಯರು ಪುರುಷರಷ್ಟೆ ಸಮಾನ ಜೀವನ ನಡೆಸಲು ಕಾರಣರಾಗಿ ಕ್ರಾಂತಿಯೋಗಿ ಬಸವಣ್ಣ ಎನಿಸಿಕೊಂಡರು. ನುಡಿದಂತೆ ನಡೆದ ಬಸವಣ್ಣನವರು ರಚಿಸಿದ ವಚನಗಳು ಇಂದಿಗೂ ಜೀವಂತವಾಗಿವೆ ಎಂದು ಜಿಲ್ಲಾಧಿಕಾರಿ ಕಾವೇರಿ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಮಾತನಾಡಿ ಭಾರತದ ಇತಿಹಾಸದಲ್ಲಿ ಸಾಮಾಜಿಕ ಅಸಮಾನತೆ ವಿರುದ್ಧ ದನಿ ಎತ್ತಿದ ಅನೇಕ ಸಾಧು ಸಂತರು, ಶರಣರಲ್ಲಿ ಬಸವಣ್ಣನವರು ಅಗ್ರಗಣ್ಯರಾಗಿದ್ದಾರೆ. ಸಾಂಪ್ರದಾಯಿಕ ಮೌಢ್ಯಗಳು, ಡಾಂಬಿಕತೆಯನ್ನು ಪ್ರಶ್ನಿಸಿ ವಚನ ಸಾಹಿತ್ಯದ ಮೂಲಕ ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ ತುಂಬಿ ಸಮಾಜವನ್ನು ಪರಿಷ್ಕರಣೆಗೊಳಪಡಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದರು.
ಜಗತ್ತಿನ ಎಲ್ಲಾ ಧರ್ಮಗಳ ಸಾರವನ್ನು ಅರಿತಿದ್ದ ಬಸವಣ್ಣನವರು ದಯೆ, ಕರುಣೆ ಇಲ್ಲದ ಧರ್ಮ ಯಾವುದು ಇಲ್ಲ. ದಯೆಯೇ ಧರ್ಮದ ಮೂಲವಯ್ಯ ಎಂದು ಸಾರಿ ವಿಶ್ವಮಾನ್ಯರಾದರು. ಅವರ ನಡೆ. ನುಡಿ, ಸದ್ಗುಣ, ವಚನಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಲತಾಕುಮಾರಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಅವರು ಮಾತನಾಡಿ ಸಮಾಜದ ಎಲ್ಲರನ್ನು ಸಮಾನತೆಯಿಂದ ಕಾಣಬೇಕೆಂದು 12ನೇ ಶತಮಾನದಲ್ಲಿಯೆ ಬಸವಣ್ಣನವರು ತಿಳಿಸಿದ್ದರು. ಅವರ ಉದ್ದೇಶ ಸಮ ಸಮಾಜದ ನಿರ್ಮಾಣವೇ ಆಗಿತ್ತು. ಅದನ್ನು ನಾವೆಲ್ಲರೂ ಪಾಲನೆ ಮಾಡಬೇಕು ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿದೇಶಕರಾದ ಎಚ್. ಚನ್ನಪ್ಪ ಅವರು ಬಸವಣ್ಣನವರ ಜಯಂತಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳಾನ್ನಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಇತರರು ಉಪಸ್ಥಿತರಿದ್ದರು.




01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು