ಯೋಜನೆಗಳ ಪ್ರಯೋಜನ ತಲುಪಿಸಲು ತ್ವರಿತ ಕ್ರಮ ವಹಿಸಿ : ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಸೂಚನೆ
ಚಾಮರಾಜನಗರ, ಜುಲೈ 24 :- ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳು ವಿಶೇಷ ಮುತುವರ್ಜಿಯಿಂದ ಕಾರ್ಯನಿರ್ವಹಿಸುವಂತೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನುಷ್ಠಾನಗೊಳಿಸಲಾಗುತ್ತಿರುವ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ತಲುಪಲು ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಗಳು, ಸಂಬಂಧಪಟ್ಟ ಇತರೆ ಇಲಾಖೆ ಅಧಿಕಾರಿಗಳು ವ್ಯಾಪಕವಾಗಿ ತೊಡಗಿಕೊಳ್ಳಬೇಕು. ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳ ನೋಂದಣಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ತ್ವರಿತವಾಗಿ ಆಗಬೇಕು. ಅರ್ಹರೆಲ್ಲರಿಗೂ ಯೋಜನೆ ಸೌಲಭ್ಯ ಸಿಗಬೇಕು ಎಂದರು.
ನೋಂದಣಿ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಯಾವುದೇ ತಾಂತ್ರಿಕ ತೊಂದರೆಗಳು ಇನ್ನಿತರ ಸಮಸ್ಯೆಗಳಿದ್ದಲ್ಲಿ ಕೂಡಲೇ ಪರಿಹರಿಸಬೇಕು. ಜನರು ಸುಗಮವಾಗಿ ಯೋಜನೆಗೆ ನೋಂದಾಯಿಸಲು, ಅರ್ಜಿ ಸಲ್ಲಿಸಲು ತೊಡಕುಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಎನ್. ಮಂಜುನಾಥಪ್ರಸಾದ್ ಅವರು ಮಾತನಾಡಿ ನೋಂದಣಿ ಕೇಂದ್ರಗಳಿಗೆ ಬರುವ ಫಲಾನುಭವಿಗಳಿಗೆ ಮೂಲ ಸೌಕರ್ಯ ಇರಬೇಕು. ಜನಸಂದಣಿಯಾಗದಂತೆ ಶೀಘ್ರವಾಗಿ ನೋಂದಣಿ ಕಾರ್ಯ ಮಾಡಬೇಕು. ಪ್ರಜಾ ಪ್ರತಿನಿಧಿ ಸ್ವಯಂ ಸೇವಕರು ಮನೆ ಮನೆಗೆ ಹೋಗಿ ನೋಂದಣಿ ಮಾಡುವ ಪ್ರಕ್ರಿಯೆಯನ್ನು ತ್ವರಿತವಾಗಿ ನಿರ್ವಹಿಸಬೇಕು ಎಂದರು.
ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ಮಾತನಾಡಿ ಜಿಲ್ಲೆಯಲ್ಲಿ 270 ಕೇಂದ್ರಗಳಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ ನೇರವಾಗಿಯೂ ನೋಂದಣಿ ಕೇಂದ್ರಕ್ಕೆ ಬಂದು ನೊಂದಾಯಿಸಿಕೊಳ್ಳಬಹುದು. ಈಗಾಗಲೇ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 35 ಸಾವಿರ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 28551 ಫಲಾನುಭವಿಗಳಿಗೆ ಮಂಜೂರಾತಿ ಆದೇಶ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ನಗದು ವರ್ಗಾಯಿಸಲಾಗುತ್ತಿರುವ ಪ್ರಕ್ರಿಯೆ ಹಾಗೂ ಶಕ್ತಿ ಯೋಜನೆ ಅನುಷ್ಠಾನ ಬಗ್ಗೆ ಪ್ರಗತಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಈವರೆಗೆ ಯೋಜನೆಯ ಪ್ರಯೋಜನ ಪಡೆದುಕೊಂಡಿರುವ ಕುರಿತು ಮಾಹಿತಿ ಪಡೆದರು.
ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಆರೋಗ್ಯ ಸೇವೆಗಳು ಜನರಿಗೆ ಸುಲಭವಾಗಿ ಸಿಗಬೇಕು. ವೈದ್ಯರು, ತಂತ್ರಜ್ಞರ ಕೊರತೆ ಇರಬಾರದು. ಜಿಲ್ಲಾ, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಲಭ್ಯವಿದ್ದು ಎಲ್ಲ ವೈದ್ಯಕೀಯ ಸೌಲಭ್ಯಗಳು ದೊರೆಯಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ದೂರುಗಳು ಬಾರದಂತೆ ಸಮರ್ಪಕವಾಗಿ ಔಷಧ ಚಿಕಿತ್ಸೆಗಳು ಲಭ್ಯವಾಗಬೇಕು ಎಂದರು.
ಕೃಷಿ, ತೋಟಗಾರಿಕೆ, ರೇಷ್ಮೆ ಚಟುವಟಿಕೆಗಳು ಜಿಲ್ಲೆಯ ರೈತರಿಗೆ ಅನುಕೂಲವಾಗಬೇಕು. ರೈತರಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಸ್ಥಳೀಯವಾಗಿ ಹಮ್ಮಿಕೊಳ್ಳಿ. ರೇಷ್ಮೆ ಬೆಳೆ ಅಭಿವೃದ್ದಿಗೆ ಎಲ್ಲಿ ಸೂಕ್ತ ಜಾಗಗಳಿವೆ, ಫಾರಂಗಳು ಲಭ್ಯವಿದೆ ಎಂಬ ಬಗ್ಗೆ ಪರಿಶೀಲಿಸಿ, ಸೌಲಭ್ಯಗಳನ್ನು ತಲುಪಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಮುಂಗಾರು ಬೇಗನೆ ಆರಂಭವಾಗಿರುವ ತಾಲೂಕುಗಳಲ್ಲಿ ಇದುವರೆಗೆ ಎಷ್ಟು ಪ್ರಮಾಣದಲ್ಲಿ ಬಿತ್ತನೆಯಾಗಿದೆ, ಮಳೆ ಕೊರತೆಯಿಂದ ಎಷ್ಟು ಪ್ರಮಾಣದಲ್ಲಿ ಬೆಳೆಗೆ ಹಾನಿಯಾಗಬಹುದು ಎಂಬ ಬಗ್ಗೆ ಮಾಹಿತಿ ಒದಗಿಸಬೇಕು. ರೈತರಿಗೆ ಬೆಳೆಗಾರರಿಗೆ ಇಲಾಖೆಗಳಿಂದ ಸೂಕ್ತ ಸಲಹೆ, ಮಾರ್ಗದರ್ಶನ ಮಾಡಬೇಕು ಎಂದರು.
ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ ರೇಷ್ಮೆ ಬೆಳೆಗೆ ಜಿಲ್ಲೆ ಪ್ರಸಿದ್ದಿಯಾಗಿತ್ತು. ರೇಷ್ಮೆ ಮಾರುಕಟ್ಟೆಯಲ್ಲಿ ಬೆಳೆಗಾರರಿಗೆ ಅನುಕೂಲವಾಗಬೇಕು. ಕುದೇರಿನಲ್ಲಿ ಇರುವ ರೇಷ್ಮೆ ತರಬೇತಿ ಕಾಲೇಜು ಸ್ಥಗಿತವಾಗದಂತೆ ನೋಡಿಕೊಳ್ಳಬೇಕಿದೆ. ಈ ಮೂಲಕ ರೇಷ್ಮೆ ಬೆಳೆಗೆ ಉತ್ತೇಜನ ನೀಡಬೇಕಿದೆ ಎಂದರು.
ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಮಾತನಾಡಿ ಕಾಡಂಚಿನ ಗ್ರಾಮಗಳಲ್ಲಿ ವಿದ್ಯುತ್ ರಸ್ತೆ, ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ. ಅರಣ್ಯ ಇಲಾಖೆಯ ತೊಡಕುಗಳಿದ್ದು ಈ ಬಗ್ಗೆ ಪ್ರತ್ಯೇಕ ಸಭೆ ಕರೆದು ವಿವರವಾಗಿ ಚರ್ಚಿಸಿದರೆ ಸಮಸ್ಯೆಗಳು ಬಗೆಹರಿಯಲಿವೆ ಎಂದು ಗಮನ ಸೆಳೆದರು.
ಶಾಸಕರಾದ ಹೆಚ್.ಎಂ. ಗಣೇಶ್ ಪ್ರಸಾದ್ ಅವರು ಮಾತನಾಡಿ ತಮ್ಮ ಕ್ಷೇತ್ರದಲ್ಲಿ ಹಲವು ಶಿಕ್ಷಕರು ವರ್ಗಾವಣೆಗೊಂಡಿದ್ದಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಆಗಬಾರದು. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ಶಿಕ್ಷಕರ ನಿಯೋಜನೆಯಾಗಬೇಕಿದೆ ಎಂದರು.
ವಿಧಾನ ಪರಿಷತ್ತಿನ ಸದಸ್ಯರಾದ ಮರಿತಿಬ್ಬೇಗೌಡ ಅವರು ಮಾತನಾಡಿ ಅರಣ್ಯದಂಚಿನ ಪೋಡುಗಳಲ್ಲಿರುವ ಜನತೆಗೆ ಸಾರಿಗೆ ಸೌಲಭ್ಯವಿಲ್ಲ. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಬರಲು ಕಷ್ಟಪಡಬೇಕಿದೆ. ಸ್ಥಗಿತಗೊಂಡಿರುವ ಜನವನ ಸಾರಿಗೆ ಯನ್ನು ಪುನರ್ ಆರಂಭಿಸಿ ಅದಕ್ಕೆ ಅಗತ್ಯವಿರುವ ನಿರ್ವಹಣಾ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಮಾಡಬೇಕೆಂದು ತಿಳಿಸಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಎನ್. ಮಂಜೇಗೌಡ ಹಾಗೂ ಡಾ. ಡಿ. ತಿಮ್ಮಯ್ಯ ಅವರು ಮಾತನಾಡಿ ರೈತರು ಬೆಳೆಗಾರರು ಕೃಷಿ, ತೋಟಗಾರಿಕೆ ಬೆಳೆಗಳ ಉತ್ಪನ್ನ ಹೆಚ್ಚಳಕ್ಕೆ ಪೂರಕವಾಗಿರುವ ತರಬೇತಿ ವಿಚಾರ ಸಂಕೀರಣ ಚಟುವಟಿಕೆಗಳನ್ನು ಸಂಬಂಧಪಟ್ಟ ಇಲಾಖೆಗಳು ಹೆಚ್ಚು ಹಮ್ಮಿಕೊಳ್ಳಬೇಕು. ಇಲಾಖಾ ಕಾರ್ಯಕ್ರಮಗಳ ಕುರಿತು ಜನರಿಗೆ ವ್ಯಾಪಕವಾಗಿ ತಿಳಿವಳಿಕೆ ನೀಡಬೇಕು. ರೇಷ್ಮೆ ಬೆಳೆಯಲ್ಲಿ ಚಾಮರಾಜನಗರ ಜಿಲ್ಲೆಯೂ ಈ ಹಿಂದೆ ಹೊಂದಿದ್ದ ಪ್ರಗತಿ ಮತ್ತೆ ಕಾಣುವಂತಾಗಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್. ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಅಧಿಕಾರಿ ಸಂತೋಷ್ ಕುಮಾರ್ ಇದ್ದರು.
ಜುಲೈ 25 ರಂದು ನಗರದಲ್ಲಿ ಬಾಲ್ಯ ವಿವಾಹ ನಿಷೇಧ, ಮಕ್ಕಳ ಹಕ್ಕುಗಳ ರಕ್ಷಣೆ ಕಾರ್ಯಕ್ರಮ,
ಜಾಗೃತಿ ವಾಕಾಥಾನ್
ಚಾಮರಾಜನಗರ. ಜುಲೈ 24 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಬಾಲ್ಯ ವಿವಾಹ ವಿರೋಧಿ ವೇದಿಕೆ, ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ ಸೇರಿದಂತೆ ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ಆಶ್ರಯದಲ್ಲಿ ಬಾಲ್ಯ ವಿವಾಹ ನಿμÉೀಧ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಕಾರ್ಯಕ್ರಮ ಹಾಗೂ ಜಾಗೃತಿಗೆ ಬೃಹತ್ ವಾಕಾಥಾನ್ ಅನ್ನು ಜುಲೈ 25 ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದ ಚಾಮರಾಜೇಶ್ವರ ದೇವಾಲಯ ಬಳಿ ಬೆಳಿಗ್ಗೆ 9.30 ಗಂಟೆಗೆ ವಾಕಾಥಾನ್ ಗೆ ಚಾಲನೆ ನೀಡಲಾಗುತ್ತದೆ. ಬೆಳಿಗ್ಗೆ 11 ಗಂಟೆಗೆ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿಯವರಾದ ಸಿ.ಟಿ. ಶಿಲ್ಪಾನಾಗ್ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ, ಉಪ ಪೊಲೀಸ್ ಅಧೀಕ್ಷಕರು ಹಾಗೂ ಮಕ್ಕಳ ವಿಶೇಷ ಪೊಲೀಸ್ ಘಟಕದ ಹಿರಿಯ ಮಕ್ಕಳ ಕಲ್ಯಾಣಾಧಿಕಾರಿ ಅನ್ಸರ್ ಅಲಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಸವಿತಾ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಪ್ರಸನ್ನ, ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷರಾದ ಸರಸ್ವತಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಗೀತಾ ಲಕ್ಷ್ಮಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎನ್. ಚೆಲುವರಾಜು, ಕರ್ನಾಟಕ ಬಾಲ್ಯ ವಿವಾಹ ವಿರೋಧಿ ವೇದಿಕೆ, ಚೈಲ್ಡ್ ರೈಟ್ಸ್ ಟ್ರಸ್ಟ್ ನ ಅಡ್ವೋಕೇಸಿ ಹಾಗೂ ಕೋ ಆರ್ಡಿನೇಟರ್ ವೆಂಕಟೇಶ್, ಕೊಳ್ಳೇಗಾಲದ ಪಿ.ಎಂ.ಎಸ್.ಆರ್. ಸಂಸ್ಥೆಯ ಆಡಿಸ್ ಅರ್ನಾಲ್ಡ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಬೆಂಗಳೂರಿನ ಚೈಲ್ಡ್ ರೈಟ್ ಟ್ರಸ್ಟ್ ನ ನಿರ್ದೇಶಕರಾದ ನಾಗಸಿಂಹ. ಜಿ. ರಾವ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಬೆಳೆ ವಿಮೆಗೆ ಮಾವು ಬೆಳೆ ಸೇರ್ಪಡೆ : ಸದುಪಯೋಗಕ್ಕೆ ಮನವಿ
ಚಾಮರಾಜನಗರ, ಜುಲೈ 24 :- ತೋಟಗಾರಿಕೆ ಇಲಾಖೆಯು 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಮಾವು ತೋಟಗಾರಿಕೆ ಬೆಳೆಯನ್ನು ಸೇರ್ಪಡೆಗೊಳಿಸಿದ್ದು, ವಿಮಾ ಸೌಲಭ್ಯ ಪಡೆಯುವಂತೆ ತಿಳಿಸಿದೆ.
ಮಾವು ಬೆಳೆಯು ಸದರಿ ಯೋಜನೆಯಡಿ ಜಿಲ್ಲೆಯ ಮುಖ್ಯ ಬೆಳೆಯಾಗಿ ಅಧಿಸೂಚನೆಯಾಗಿದ್ದು ಎಲ್ಲಾ ಹೋಬಳಿಯ ರೈತರು ಮಾವು ಬೆಳೆಗೆ ವಿಮಾ ಸೌಲಭ್ಯ ಪಡೆಯಬಹುದಾಗಿದೆ. ಮಾವು ಬೆಳೆಗೆ ಪ್ರತಿ ಹೆಕ್ಟೇರ್ ಗೆ ವಿಮೆ ಕೈಗೊಳ್ಳಲು 4 ಸಾವಿರ ರೂ. ವಿಮಾ ಕಂತು ನಿಗದಿಯಾಗಿದೆ.
ಆಸಕ್ತ ಮಾವು ಬೆಳೆಗಾರರು ತಾಲೂಕು ಮತ್ತು ಹೋಬಳಿ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಹತ್ತಿರದ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ವಿಮಾ ಕಂತು ಪಾವತಿಸಬಹುದಾಗಿದೆ. ವಿಮಾ ಕಂತು ಪಾವತಿಸಲು ಜುಲೈ 31 ಕೊನೆಯ ದಿನವಾಗಿದೆ.
ಅಧಿಸೂಚಿತ ಬೆಳೆಗಳಿಗೆ ಸಾಲ ಪಡೆದ ರೈತರ ವಂತಿಕೆಯನ್ನು ಸಾಲ ಪಡೆದ ಬ್ಯಾಂಕ್ ಗಳಿಂದಲೇ ವಿಮಾ ಮೊತ್ತ ಕಡಿತಗೊಳಿಸಲಾಗುವುದು. ಆಕ್ಷೇಪಣೆಗಳಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಬ್ಯಾಂಕ್ ಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳ ವಿತರಣೆ
ಚಾಮರಾಜನಗರ, ಜುಲೈ 24:- ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಕೊಳ್ಳೇಗಾಲ ಹಾಗೂ ಹನೂರು ತಾಲೂಕು ವ್ಯಾಪ್ತಿಯ 479 ಅಂಗನವಾಡಿ ಕೇಂದ್ರಗಳಿಗೆ ಆಗಸ್ಟ್ 5 ರವರೆಗೆ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತದೆ.
ಜುಲೈ 25ರಂದು ಬಂಡಳ್ಳಿ, ತೆಳ್ಳನೂರು, 26ರಂದು ಅಜ್ಜೀಪುರ, ಮಧುವನಹಳ್ಳಿ-1 ಮತ್ತು ಮಧುವನಹಳ್ಳಿ-2, 27ರಂದು ರಾಮಾಪುರ, ಕಾಮಗೆರೆ, 28ರಂದು ಪಿ.ಜಿ.ಪಾಳ್ಯ, ಕಸಬಾ-1, 29ರಂದು ಲೊಕ್ಕನಹಳ್ಳಿ, ಕಸಬಾ-2, 31ರಂದು ಮಾರ್ಟಳ್ಳಿ, ಚಿಲಕವಾಡಿ, ಆಗಸ್ಟ್ 1ರಂದು ಕೂಡ್ಲೂರು, 2ರಂದು ಕೌದಳ್ಳಿ, 3ರಂದು ದಂಟಳ್ಳಿ ಹಾಗೂ 5ರಂದು ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತದೆ ಎಂದು ಕೊಳ್ಳೇಗಾಲ ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.