ಚಾಮರಾಜೇಶ್ವರಸ್ವಾಮಿ ರಥೋತ್ಸವ : ಅಧಿಕಾರಿ ಹಾಗೂ ಮುಖಂಡರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ
ಚಾಮರಾಜನಗರ, ಜೂನ್ 28 :- ಚಾಮರಾಜನಗರದಲ್ಲಿ ಜುಲೈ 3ರಂದು ನಡೆಯುವ ಶ್ರೀ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವವನ್ನು ಅದ್ದೂರಿಯಾಗಿ ನಡೆಸುವ ಸಂಬಂಧ ಅಧಿಕಾರಿಗಳು ಹಾಗೂ ವಿವಿಧ ಮುಖಂಡರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಹಾಗೂ ತಹಶೀಲ್ದಾರ್ ಐ.ಇ. ಬಸವರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶ್ರೀ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವ ಸಂಬಂಧ ವಿವರವಾಗಿ ಚರ್ಚಿಸಲಾಯಿತು.
ದೇವಸ್ಥಾನ ಹಾಗೂ ರಥ ಸಾಗುವ ಕಡೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಬೇಕು. ರಥೋತ್ಸವದಂದು ತೇರು ಸಾಗುವ ಮಾರ್ಗಗಳಲ್ಲಿ ಮರಳು ಹಾಕಬೇಕು. ರಥೋತ್ಸವ ಮುಗಿದ ಕೂಡಲೇ ಮರಳನ್ನು ತೆರವುಗೊಳಿಸಿ ವಾಹನ ಸವಾರರು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಭಕ್ತಾಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಕರ್ಕಶ ಶಬ್ದದ ಪೀಪಿಗಳಿಂದ ಉಂಟಾಗುವ ಹಾಗೂ ಬಣ್ಣ ಹಚ್ಚಿ ಸಾರ್ವಜನಿಕರಿಗೆ ಕಿರಿಕಿರಿ ಮಾಡುವುದನ್ನ ತಪ್ಪಿಸಬೇಕು. ತೇರು ರಕ್ಷಣೆಗೆ ಮೇಲ್ಚಾವಣಿ ನಿರ್ಮಾಣ ಮಾಡಬೇಕು ಎಂಬೂದು ಸೇರಿದಂತೆ ಇತರೆ ಸಲಹೆಗಳನ್ನು ಮುಖಂಡರು ಸಭೆಯಲ್ಲಿ ನೀಡಿದರು.
ತಹಶೀಲ್ದಾರ್ ಬಸವರಾಜು ಅವರು ಮಾತನಾಡಿ ಕಳೆದ ಬಾರಿ ಅಚ್ಚುಕಟ್ಟಾಗಿ ರಥೋತ್ಸವ ನೆರವೇರಿದೆ. ಈ ವರ್ಷವೂ ಸಹ ಸುಸೂತ್ರವಾಗಿ ನಡೆಯಲು ಈ ಹಿಂದಿನಂತೆ ಎಲ್ಲರೂ ಸಹಕಾರ ನೀಡಬೇಕು. ಪ್ರತಿ ಗ್ರಾಮದ ಗ್ರಾಮಸ್ಥರು, ಯಜಮಾನರು, ಮುಖಂಡರು ರಥೋತ್ಸವಕ್ಕೆ ಅಗತ್ಯವಿರುವ ಎಲ್ಲಾ ಸಹಕಾರ ಮುಂದುವರೆಸಬೇಕು ಎಂದು ಮನವಿ ಮಾಡಿದರು.
ಈ ವರ್ಷವು ಸಾಕಷ್ಟು ಭಕ್ತಾಧಿಗಳು ಬರುವ ನಿರೀಕ್ಷೆಯಿದೆ. ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಜಾರಿಗೊಳಿಸಲಾಗುವುದು. ದೇವಸ್ಥಾನದ ಸುತ್ತಲೂ ಶುಚಿತ್ವ ಕಾಪಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ರಥೋತ್ಸವಕ್ಕೂ ಮೊದಲು ಹಾಗೂ ರಥೋತ್ಸವದ ನಂತರ ಎಲ್ಲಾ ಅವಶ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಹಶೀಲ್ದಾರ್ ಬಸವರಾಜು ಅವರು ತಿಳಿಸಿದರು.
ನಗರಸಭೆಯ ಸದಸ್ಯರಾದ ಚಿನ್ನಮ್ಮ, ನೀಲಮ್ಮ, ಭಾಗ್ಯಮ್ಮ, ಸುದರ್ಶನ್ ಗೌಡ, ದೇವಸ್ಥಾನದ ಆಗಮಿಕರಾದ ದರ್ಶನ್, ಅರ್ಚಕರಾದ ಅನಿಲ್, ಮುಖಂಡರಾದ ಗಣೇಶ್ ದೀಕ್ಷಿತ್, ನಗರಸಭೆಯ ಪೌರಾಯುಕ್ತರಾದ ಎಸ್.ವಿ. ರಾಮದಾಸ್, ಪಟ್ಟಣ ಪೋಲಿಸ್ ಠಾಣೆ ಇನ್ಸ್‍ಪೆಕ್ಟರ್ ಸುನೀಲ್, ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜು, ಅಗ್ನಿಶಾಮಕಾಧಿಕಾರಿ ಶಿವಾಜಿರಾವ್ ಪವರ್, ದೇವಸ್ಥಾನದ ಕಾರ್ಯನಿರ್ವಾಹಕಾಧಿಕಾರಿ ರಾಜಶೇಖರ್‍ಮೂರ್ತಿ, ಬಂಡಿಗಾರ್ ದಪೇದಾರ್ ಹಾಗೂ ವಿವಿಧ ಕೋಮಿನ ಮುಖಂಡರು, ಯಜಮಾನರು ಸಭೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-೧
-------
ಬಕ್ರೀದ್ ಹಬ್ಬ ಹಿನ್ನೆಲೆ : ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶಾಂತಿ ಸೌಹಾರ್ದತ ಸಭೆ
ಚಾಮರಾಜನಗರ, ಜೂನ್ 27 :- ಇದೇ ಜೂನ್ 29ರಂದು ಬಕ್ರೀದ್ ಹಬ್ಬ ಆಚರಣೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರ ಅಧ್ಯಕ್ಷತೆಯಲ್ಲಿಂದು ಶಾಂತಿ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಅಧಿಕಾರಿಗಳು ಹಾಗೂ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಈ ಹಿಂದಿನಿಂದಲೂ ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಹಬ್ಬವನ್ನು ಜಿಲ್ಲೆಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಇದೇ ರೀತಿ ಈ ಬಾರಿಯೂ ಹಬ್ಬ ಆಚರಿಸುವಂತೆ ಮನವಿ ಮಾಡಿದರು.
ತ್ಯಾಗದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಸಾಮರಸ್ಯದಿಂದ ಆಚರಿಸಲಾಗುತ್ತಿದೆ. ಇದೇ ಪರಂಪರೆ ಜಿಲ್ಲೆಯಲ್ಲಿ ಮುಂದುವರೆಯಲಿ. ಹಬ್ಬಕ್ಕೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲಾಗುತ್ತದೆ ಎಂದರು.
ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಬ್ಬದ ಸಂದರ್ಭದಲ್ಲಿ ಕುಡಿಯುವ ನೀರು, ನೈರ್ಮಲ್ಯ, ವಿದ್ಯುತ್ ಸೇರಿದಂತೆ ಯಾವುದೇ ಸೌಕರ್ಯಗಳಿಗೆ ಕೊರತೆಯಾಗದಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಇದೇ ವೇಳೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಮಾತನಾಡಿ ಜಿಲ್ಲೆಯಲ್ಲಿ ಈ ಹಿಂದೆಯೂ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲಾಗಿದೆ. ಎಲ್ಲಿಯೂ ಸೌಹಾರ್ದತೆಗೆ ಭಂಗ ಬಂದಿಲ್ಲ. ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಈದ್ಗಾ ಮೈದಾನ ಸೇರಿದಂತೆ ಪ್ರಾರ್ಥನಾ ಮಂದಿರಗಳ ಬಳಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದರು.
ಕಾನೂನು ಸುವ್ಯವಸ್ಥೆಗೆ ಎಲ್ಲರ ಸಹಕಾರ ಅಗತ್ಯವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಯಾವುದೇ ಪ್ರಚೋದಾನಾತ್ಮಕ ಹೇಳಿಕೆಗಳಿಗೆ ಕಿವಿಗೊಡಬಾರದು. ವಿಶೇಷವಾಗಿ ಯುವ ಜನರಿಗೆ ಹಿರಿಯರು ಮಾರ್ಗದರ್ಶನ ಮಾಡಬೇಕು. ಸಾಮರಸ್ಯದಿಂದ ಹಬ್ಬ ಆಚರಿಸುವ ನಿಟ್ಟಿನಲ್ಲಿ ಎಲ್ಲಾ ಸಹಕಾರ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಮುಖಂಡರು ಹಬ್ಬ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಈ ಬಾರಿಯು ಶಾಂತಿಯುತವಾಗಿ ಸೌಹಾರ್ದತೆ, ಸಾಮರಸ್ಯ ಕಾಪಾಡಿಕೊಂಡು ಹಬ್ಬ ಆಚರಿಸಲಿದ್ದೇವೆ ಎಂದರು.
ತಹಶೀಲ್ದಾರರಾದ ಐ.ಇ. ಬಸವರಾಜು, ಮಂಜುಳಾ, ನಗರಸಭೆ ಆಯುಕ್ತರಾದ ಎಸ್.ವಿ. ರಾಮದಾಸ್, ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ. ರಾಜು, ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರು, ಇತರೆ ಮುಖಂಡರು ಸಭೆಯಲ್ಲಿ ಹಾಜರಿದ್ದರು.
ಚಿತ್ರ-೨
-----
ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ : ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ
ಚಾಮರಾಜನಗರ, ಜೂನ್ 27 - ಬೆಂಗಳೂರು ನಿರ್ಮಾಣದಲ್ಲಿ ನಾಡಪ್ರಭು ಕೆಂಪೇಗೌಡರ ಸಾಧನೆ ಕೊಡುಗೆ ಅಪಾರವಾಗಿದ್ದು, ಸ್ಮರಣೀಯವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಿರ್ಮಾಣಕ್ಕೆ ಕಾರಣರಾದ ಕೆಂಪೇಗೌಡರ ಕೊಡುಗೆಯನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕಿದೆ. ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿಯೂ ನಿರ್ಮಿಸಿದ ಗೋಪುರ, ದ್ವಾರಗಳು ಇಂದಿಗೂ ಸಹ ಅವರ ಅಸಾಮಾನ್ಯ ಜ್ಞಾನದ ಬಗ್ಗೆ ತಿಳಿಸುತ್ತದೆ. ಸಾಕಷ್ಟು ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡಿದರು. ಅಲ್ಲದೇ ವೃತ್ತಿಯ ಆಧಾರಿತವಾಗಿ ನಿರ್ಮಿಸಿದ ಪೇಟೆಗಳನ್ನು ಉದಾಹರಣೆ ಸಹಿತವಾಗಿ ಇಂದು ಸಹ ನೋಡಬಹುದಾಗಿದೆ ಎಂದರು.
ಸುಭದ್ರ ನೆಲೆ, ವಿಶ್ವ ವಿಖ್ಯಾತ ನಗರವಾದ ಬೆಂಗಳೂರು ನಿರ್ಮಾಪಕರಾದ ಕೆಂಪೇಗೌಡರ ಜನ್ಮ ದಿನದ ಆಚರಣೆಯು ಎಲ್ಲರ ಹೆಮ್ಮೆಯಾಗಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ಕೆಂಪೇಗೌಡರ ಜಯಂತಿಯ ಶುಭಾಶಯಗಳನ್ನು ಕೋರುವುದಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಅವರು ಮಾತನಾಡಿ ಕೆಂಪೇಗೌಡರ ಜೀವನ ಚರಿತ್ರೆಯಿಂದ ಕಲಿಯುವುದು ತುಂಬಾ ಇದೆ. ಕೆಂಪೇಗೌಡರವರು ತಮ್ಮ ನಿಸ್ವಾರ್ಥ ಮನೋಭಾವದಿಂದ ಇಂದು ಜಗತ್ಪ್ರಸಿದ್ದಿಯನ್ನ ಪಡೆದಿದ್ದಾರೆ. ಅವರ ಅಸಾಮಾನ್ಯ ವ್ಯಕ್ತಿತ್ವ, ಜಾಣತನ, ಆಡಳಿತದಿಂದ ಇಂದಿನ ಬೃಹತ್ ಬೆಂಗಳೂರು ಕಾಣಲು ಸಾಧ್ಯವಾಯಿತು. ಯಾವ ವ್ಯಕ್ತಿ ತನಗೋಸ್ಕರ ಬದುಕದೇ ಪರರ ಒಳಿತಿಗಾಗಿ ಬದುಕುತ್ತಾರೆಯೋ ಅವರು ಯಾವಾಗಲೂ ಜೀವಂತವಾಗಿರುತ್ತಾರೆ. ಅಂತಹ ಸಾಲಿನಲ್ಲಿ ನಾಡಪ್ರಭು ಕೆಂಪೇಗೌಡರು ನಿಲ್ಲುತ್ತಾರೆ ಎಂದು ತಿಳಿಸಿದರು.
ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಟಿ. ಜಯಲಕ್ಷ್ಮೀ ಸೀತಾಪುರ ಅವರು ಮಾತನಾಡಿ ಕೆಂಪೇಗೌಡರ ಸಾಧನೆಗೆ ಅವರ ತಂದೆ ತಾಯಿ ನೀಡಿದ ನೀತಿ ಶಿಕ್ಷಣವೇ ಕಾರಣ ಎಂದು ಹೇಳಬಹುದು. ಅವರು ನೀಡಿದ ನೀತಿ ಪಾಠಗಳೇ ಕೆಂಪೇಗೌಡರು ಜಗತ್ತಿನಾದ್ಯಂತ ಹೆಸರು ಮಾಡಲು ಸಾಧ್ಯವಾಯಿತು. ಇಂದಿನ ಶಿಕ್ಷಣಕ್ಕೆ ಹೋಲಿಸಿದರೆ ಅಂದಿನ ಶಿಕ್ಷಣ ಮೌಲ್ಯವನ್ನು ಅರ್ಥಮಾಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಸಮುದಾಯದ ಮುಖಂಡರಾದ ಚಾ.ರಂ. ಶ್ರೀನಿವಾಸಗೌಡ, ಪುಟ್ಟಸ್ವಾಮಿಗೌಡ, ಪಣ್ಯದಹುಂಡಿ ರಾಜು, ಚಿನ್ನಮುತ್ತು, ಸಿ.ವಿ. ನಾಗೇಂದ್ರ, ಮಹೇಶ್‍ಗೌಡ ಇತರೆ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಮೆರವಣೆಗೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಬಳಿ ಚಾಲನೆ ನೀಡಿದರು. ಮೆರವಣಿಗೆÀಯು ವಿವಿಧ ಕಲಾ ತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದ ಬಳಿ ಮುಕ್ತಾಯಗೊಂಡಿತು.
ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂನ್ 27- ಚಾಮರಾಜನಗರ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಯ ನೇಮಕಾತಿಗಾಗಿ ಅರ್ಹ ವಕೀಲರಿಂದ ಅರ್ಜಿ ಆಹ್ವಾನಿಸಲಾಗಿದೆ.
10 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿದ ಅರ್ಹ ವಕೀಲರು ಸಂಬಂಧಪಟ್ಟ ದಾಖಲಾತಿಗಳನ್ನು ದೃಢೀಕರಿಸಿ ಜುಲೈ 15ರೊಳಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬಹುದೆಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 3 ರಂದು ಶ್ರೀ ಚಾಮರಾಜೇಶ್ವರಸ್ವಾಮಿ ಮಹಾ ರಥೋತ್ಸವ : ವಿವಿಧ ಪೂಜಾ ಕೈಂಕರ್ಯಗಳು
ಚಾಮರಾಜನಗರ, ಜೂನ್ 27 - ನಗರದಲ್ಲಿ ಶ್ರೀ ಚಾಮರಾಜೇಶ್ವರಸ್ವಾಮಿಯವರ ಮಹಾ ರಥೋತ್ಸವವು ಜುಲೈ 3 ರಂದು ನಡೆಯಲಿದ್ದು, ಇದರ ಅಂಗವಾಗಿ ಜುಲೈ 7ರವರೆಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ.
ಜುಲೈ 3ರಂದು ಸೋಮವಾರ ಮೂಲ/ಪೂರ್ವಾಷಾಢ ನಕ್ಷತ್ರದಲ್ಲಿ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಶ್ರೀಮನ್ಮಹಾರಥಾರೋಹಣ ಜರುಗಲಿದೆ.
ಜೂನ್ 28ರಂದು ಚಂದ್ರಮಂಡಲಾರೋಹಣೋತ್ಸವ, 29ರಂದು ಅನಂತ ಪೀಠಾರೋಹಣೋತ್ಸವ, 30ರಂದು ಪುಷ್ಪಮಂಟಪಾರೋಹಣೋತ್ಸವ, ಜುಲೈ 1 ರಂದು ವೃಷಭಾರೋಹಣೋತ್ಸವ, 2ರಂದು ವಸಂತೋತ್ಸವ ಪೂರ್ವಕ ಗಜಾವಾಹನೋತ್ಸವ ನಡೆಯಲಿದೆ.
ಜುಲೈ 4ರಂದು ಮೃಗಯಾತ್ರಾ ಪೂರ್ವಕ ಅಶ್ವಾರೋಹಣ ನಂತರ ಮಹಾಭೂತಾರೋಹಣ, ದೇವಿ ಪ್ರಣಯ ಕಲಹ ಸಧಾನೋತ್ಸವ, 5ರಂದು ಹಗಲುಚೂರ್ಣೋತ್ಸವ ಪೂರ್ವಕ ಅವಭೃತ ತೀರ್ಥಸ್ನಾನ, ಧ್ವಜಾವರೋಹಣ, ಮೌನಬಲಿ, 6ರಂದು ಪುಷ್ಪಯೋಗ ಪೂರ್ವಕ ಕೈಲಾಸಯಾನಾರೋಹಣೋತ್ಸವ ಹಾಗೂ 7ರಂದು ಮಹಾಸಂಪ್ರೋಕ್ಷಣಾ ಪೂರ್ವಕ ನಂದಿವಾಹನೋತ್ಸವ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.
ತೋಟಗಾರಿಕೆ ಬೆಳೆಗಳಿಗೆ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಠಾನ
ಚಾಮರಾಜನಗರ, ಜೂನ್ 27 :- 2023-24ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಜಿಲ್ಲೆಯ ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಟೊಮೆಟೊ, ಆಲೂಗಡ್ಡೆ ಮತ್ತು ಅರಿಶಿಣ ಬೆಳೆಗೆ ಬೆಳೆವಿಮೆ ಕೈಗೊಳ್ಳಲು ಅವಕಾಶವಿದೆ.
ನೀರಾವರಿ ಆಶ್ರಿತ ಈರುಳ್ಳಿ ಬೆಳೆಗೆ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ 80500 ರೂ.ಗಳಾಗಿದ್ದು ವಿಮಾ ಕಂತಾಗಿ ಶೇ. 5ರಷ್ಟು ಅಂದರೆ ಪ್ರತಿ ಎಕರೆಗೆ 1630 ರೂ. ಗಳನ್ನು ಜೂನ್ 30 ರೊಳಗೆ ಪಾವತಿಸಬೇಕಿದೆ.
ಟೊಮೆಟೊ ಬೆಳೆಗೆ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ 141500 ರೂ.ಗಳಾಗಿದ್ದು ವಿಮಾ ಕಂತಾಗಿ ಶೇ. 5ರಷ್ಟು ಅಂದರೆ ಪ್ರತಿ ಎಕರೆಗೆ 2864 ರೂ.ಗಳನ್ನು ಜುಲೈ 15 ರೊಳಗೆ ಪಾವತಿಸಬೇಕಿದೆ.
ನೀರಾವರಿ ಆಶ್ರಿತ ಆಲೂಗಡ್ಡೆ ಬೆಳೆಗೆ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ 148500 ರೂ.ಗಳಾಗಿದ್ದು ವಿಮಾ ಕಂತಾಗಿ ಶೇ. 5ರಷ್ಟು ಅಂದರೆ ಪ್ರತಿ ಎಕರೆಗೆ 3006 ರೂ.ಗಳನ್ನು ಜುಲೈ 15 ರೊಳಗೆ ಪಾವತಿಸಬೇಕಿದೆ.
ಅರಿಶಿಣ ಬೆಳೆಗೆ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ 142250 ರೂ.ಗಳಾಗಿದ್ದು ವಿಮಾ ಕಂತಾಗಿ ಶೇ. 5ರಷ್ಟು ಅಂದರೆ ಪ್ರತಿ ಎಕರೆಗೆ 2880 ರೂ.ಗಳನ್ನು ಜುಲೈ 31ರೊಳಗೆ ಪಾವತಿಸಬೇಕಿದೆ.
ಚಾಮರಾಜನಗರ ತಾಲೂಕಿನ ಕಸಬಾ ಹಾಗೂ ಚಂದಕವಾಡಿ ಹೋಬಳಿಗೆ ನೀರಾವರಿ ಆಶ್ರಿತ ಈರುಳ್ಳಿ ಹಾಗೂ ಅರಿಶಿಣ, ಟೊಮ್ಯಾಟೊ, ಸಂತೇಮರಹಳ್ಳಿ ಹೋಬಳಿಗೆ ಅರಿಶಿಣ, ಟೊಮ್ಯಾಟೊ, ಹರದನಹಳ್ಳಿ ಹೋಬಳಿಗೆ ನೀರಾವರಿ ಆಶ್ರಿತ ಈರುಳ್ಳಿ, ಆಲೂಗಡ್ಡೆ ಮತ್ತು ಅರಿಶಿಣ, ಟೊಮ್ಯಾಟೊ ಹಾಗೂ ಹರವೆ ಹೋಬಳಿಗೆ ಅರಿಶಿಣ, ಟೊಮ್ಯಾಟೊ ಬೆಳೆಗಳು ವಿಮಾ ವ್ಯಾಪ್ತಿಗೆ ಒಳಪಡಲಿವೆ.
ಗುಂಡ್ಲುಪೇಟೆ ತಾಲೂಕಿನ ಕಸಬಾ, ತೆರಕಣಾಂಬಿ, ಬೇಗೂರು, ಹಂಗಳ ಹೋಬಳಿಗೆ ನೀರಾವರಿ ಆಶ್ರಿತ ಈರುಳ್ಳಿ, ಹಾಗೂ ಅರಿಶಿಣ, ಟೊಮ್ಯಾಟೊ ಬೆಳೆಗಳು ವಿಮಾ ವ್ಯಾಪ್ತಿಗೆ ಒಳಪಡಲಿವೆ.
ಕೊಳ್ಳೇಗಾಲ ತಾಲೂಕಿನ ಕಸಬಾ, ಪಾಳ್ಯ ಹೋಬಳಿಗೆ ನೀರಾವರಿ ಆಶ್ರಿತ ಈರುಳ್ಳಿ ಮತ್ತು ಅರಿಶಿಣ, ಟೊಮ್ಯಾಟೊ ಬೆಳೆಗಳು ವಿಮಾ ವ್ಯಾಪ್ತಿಗೆ ಒಳಪಡಲಿವೆ.
ಹನೂರು ತಾಲೂಕಿನ ರಾಮಾಪುರ ಹೋಬಳಿಗೆ ನೀರಾವರಿ ಆಶ್ರಿತ ಈರುಳ್ಳಿ ಹಾಗೂ ಅರಿಶಿಣ, ಲೊಕ್ಕನಹಳ್ಳಿ ಹೋಬಳಿಗೆ ನೀರಾವರಿ ಆಶ್ರಿತ ಈರುಳ್ಳಿ, ಆಲೂಗಡ್ಡೆ ಮತ್ತು ಅರಿಶಿಣ, ಟೊಮ್ಯಾಟೊ, ಹನೂರು ಹೋಬಳಿಗೆ ನೀರಾವರಿ ಆಶ್ರಿತ ಈರುಳ್ಳಿ ಹಾಗೂ ಅರಿಶಿಣ, ಟೊಮ್ಯಾಟೊ ಬೆಳೆಗಳು ವಿಮಾ ವ್ಯಾಪ್ತಿಗೆ ಸೇರಲಿವೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೆಶಕರಾದ ಶಿವಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರ್ಶ ವಿದ್ಯಾಲಯದಲ್ಲಿ 7 ರಿಂದ 9ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂನ್ 28 - ಚಾಮರಾಜನಗರದ ಆದರ್ಶ ವಿದ್ಯಾಲಯದಲ್ಲಿ 2023-24ನೇ ಶೈಕ್ಷಣಿಕ ಸಾಲಿಗೆ 7 ರಿಂದ 9ನೇ ತರಗತಿಯವರೆಗೆ ಖಾಲಿ ಇರುವ ಸೀಟುಗಳಿಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಚಾಮರಾಜನಗರ ತಾಲೂಕಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಜುಲೈ 11ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಚಾಮರಾಜನಗರದ ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.